ನ್ಯೂಸ್

ದೆಹಲಿ: ಮೆಟ್ರೋ ನಿಲ್ದಾಣ ಕುಸಿದು ನಾಲ್ವರ ಸ್ಥಿತಿ ಗಂಭೀರ!

ಹೊಸದಿಲ್ಲಿ: ಇಂದು ಬೆಳಗ್ಗೆ ಗೋಕುಲಪುರಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿದು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಈಶಾನ್ಯ ದೆಹಲಿಯಲ್ಲಿ ವರದಿಯಾಗಿದೆ.

ಮೆಟ್ರೋ ನಿಲ್ದಾಣದ ಭಾಗ ಕುಸಿದ ಕೂಡಲೇ ಕೆಳಗಿದ್ದ ಓರ್ವ ವ್ಯಕ್ತಿ ಅದರ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾನೆ. ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ತನ್ನ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಮೇಲಾವರಣದ ಒಂದು ಭಾಗ ಅವನ ಮೇಲೆ ಬಿದ್ದಿದೆ. ಕೆಲವು ಸ್ಥಳೀಯರೊಂದಿಗೆ ಪೊಲೀಸ್ ಸಿಬ್ಬಂದಿಗಳು ಆತನನ್ನು ಅವಶೇಷಗಳಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಬಳಿಕ ಕೂಡಲೇ ಅವರನ್ನು ಹತ್ತಿರದ ಜಿಟಿಬಿ ಆಸ್ಪತ್ರೆಗೆ ಸಾಗಿಸಲಾಯಿತು.

ಈ ಸಂಬಂಧ ಕಾನೂನು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಕ್ರೇನ್ ಹಾಗೂ ಜೆಸಿಬಿಗಳ ಸಹಾಯದಿಂದ ಅವಶೇಷಗಳನ್ನು ತೆಗೆಯಲಾಗಿದೆ,(ಏಜೆನ್ಸೀಸ್).