ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಜೈಲುಪಾಲಾಗಿರುವ ಉಗ್ರ, ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್‌ಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಮಂಗಳವಾರ (ಸೆಪ್ಟೆಂಬರ್ 10) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಹಾಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸುವ ಸಲುವಾಗಿ ಮಧ್ಯಂತರ ಜಾಮೀನು ಕೋರಿ ರಶೀದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಪಟಿಯಾಲಾ ಹೌಸ್ ಕೋರ್ಟ್ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ರಶೀದ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ.
ಎಂಜಿನಿಯರ್ ರಶೀದ್ ಎಂದೇ ಖ್ಯಾತಿ ಪಡೆದಿರುವ ಶೇಖ್ ಅಬ್ದುಲ್ ರಶೀದ್, 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ವಿರುದ್ಧ ಜಯ ಸಾಧಿಸಿದ್ದರು. ಜುಲೈ 5 ರಂದು, ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ರಶೀದ್‌ಗೆ ಕಸ್ಟಡಿ ಪೆರೋಲ್ ನೀಡಿತ್ತು .
2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‌ಐಎ ರಶೀದ್ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. 2019ರಿಂದ ಅವರು ಜೈಲಿನಲ್ಲಿದ್ದಾರೆ. ಇದೀಗ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲೆಂದು ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅಕ್ಟೋಬರ್ 02ರವರೆಗೆ ಅವರ ಜಾಮೀನು ಅವಧಿ ಚಾಲ್ತಿಯಲ್ಲಿರಲಿದೆ.