ನ್ಯೂಸ್

ಪತ್ನಿ ಜೊತೆ ವಾಸಿಸಲಾಗದು ಎಂದಿದ್ದೇಕೆ ಸಿಂಗರ್ ಹನಿ ಸಿಂಗ್?: ವಿಚ್ಛೇದನಕ್ಕೆ ಅಸ್ತು ಎಂದ ಕೋರ್ಟ್

ನವದೆಹಲಿ: ಗಾಯಕ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್‌ಗೆ ಇಲ್ಲಿನ ಸಾಕೇತ್ ಕೋರ್ಟ್‌ ವಿಚ್ಛೇದನ ನೀಡಿದೆ. ಹನಿಸಿಂಗ್​ ವಿರುದ್ಧ ಅವರ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಒಂದು ವರ್ಷದ ಬಳಿಕ ಅವರಿಗೆ ವಿಚ್ಛೇದನ ಸಿಕ್ಕಿದೆ.

ಪತಿ - ಪತ್ನಿ ತಮ್ಮ ನಡುವಿನ ಎಲ್ಲಾ ವಿವಾದಗಳನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದ ನಂತರ ಅವರಿಗೆ ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಪರಮ್‌ಜೀತ್ ಸಿಂಗ್ ಅವರು ವಿಚ್ಛೇದನದ ಆದೇಶವನ್ನು ನೀಡಿದರು. 1 ಕೋಟಿ ರೂ. ಪರಿಹಾರ ಮತ್ತು ಜೀವನಾಂಶಕ್ಕೆ ಒಪ್ಪಿಗೆ ನೀಡಿದ ಬಳಿಕ ಶಾಲಿನಿ ಪ್ರಕರಣವನ್ನು ಹಿಂಪಡೆದಿದ್ದಾರೆ.

ಪತಿ ಹಿಂಸೆ ನೀಡುತ್ತಿದ್ದಅರೆ ಎಂದು ಆಕೆ ಆರೋಪಿಸಿದ್ದರು. 13 ವರ್ಷದ ಹಿಂದೆ ಅಂದರೆ ಜನವರಿ 2011 ರಲ್ಲಿ ಇವರ ವಿವಾಹವಾಗಿತ್ತು. ಸೆಪ್ಟೆಂಬರ್ 2022 ರಲ್ಲಿ ಪರಸ್ಪರ ವಿಚ್ಛೇದನವನ್ನು ಕೋರಿ ಮನವಿ ಸಲ್ಲಿಸಿದ್ದರು.

ವಿಚಾರಣೆಯ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಹನಿ ಸಿಂಗ್ ಅವರು ಇನ್ನು ಮುಂದೆ ತಮ್ಮ ಪತ್ನಿಯೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹನಿ ಸಿಂಗ್ ಪರ ವಕೀಲ ಇಶಾನ್ ಮುಖರ್ಜಿ ವಾದ ಮಂಡಿಸಿದ್ದರು. ವಿಚ್ಛೇದನಕ್ಕೆ ನ್ಯಾಯಾಲಯವು ಅವಕಾಶ ಮಾಡಿಕೊಟ್ಟಿದೆ. ಇದು ಖಾಸಗಿ ವೈವಾಹಿಕ ವಿವಾದ ಎಂದು ಅವರು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು.