ನವದೆಹಲಿ: ಇಂದು ಪಂಜಾಬ್ ಸಿಎಂ ಭಗವಂತ್ ಮಾನ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈ ಖುಷಿ ಸಂದರ್ಭದಲ್ಲಿರುವ ಎಎಪಿ ನಾಯಕನಿಗೆ ದೆಹಲಿಯ ಇಡಿ ಕಸ್ಟಡಿಯಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ಅಭಿನಂದನೆ ತಿಳಿಸಿದರು. ಭಗವಂತ್ ಮಾನ್ ಅವರ ಪತ್ನಿಯನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವೇಳೆ ದಂಪತಿಗೆ ಪುತ್ರಿಯ ಜನನವಾಗಿದೆ.
ಮದ್ಯದ ನೀತಿ ಪ್ರಕರಣದ ವಿಚಾರಣೆಯ ನಂತರ ನ್ಯಾಯಾಲಯದಿಂದ ಹೊರಬರುತ್ತಿದ್ದ ಕೇಜ್ರಿವಾಲ್, "ಭಗವಂತ್ ಮಾನ್ ದಂಪತಿಗೆ ಹೆಣ್ಣು ಮಗುವಾಗಿದೆ. ಅವರಿಗೆ ನಾನು ಅಭಿನಂದಿಸುತ್ತೇನೆ" ಎಂದರು. ಇನ್ನು ಈ ವಿಷಯವನ್ನು ಎಕ್ಸ್ನಲ್ಲಿ ತಿಳಿಸಿದ ( ಈ ಹಿಂದೆ ಟ್ವಿಟರ್) ಭಗವಂತ್ ಮಾನ್, "ದೇವರು ಮಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ" ಎಂದರು.
ಈ ಮಧ್ಯೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜಾರಿ ನಿರ್ದೇಶನಾಲಯದ ಬಂಧನವನ್ನು ಏಪ್ರಿಲ್ 1ರವರೆಗೆ 4 ದಿನಗಳವರೆಗೆ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾರ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ತನಿಖಾ ಸಂಸ್ಥೆಯು ಕೇಜ್ರಿವಾಲ್ರನ್ನು ಏಳು ದಿನಗಳ ಕಾಲ ಕಸ್ಟಡಿಗೆ ಕೋರಿದ್ದು, ಪ್ರಕರಣದೊಂದಿಗೆ ಸಂಬಂಧ ಹೊಂದಿರುವ ಕೆಲವು ವ್ಯಕ್ತಿಗಳನ್ನು ಕರೆಸಬೇಕಿದೆ ಎಂದು ತಿಳಿಸಿದೆ,(ಏಜೆನ್ಸೀಸ್).