ನವದೆಹಲಿ: ನಿನ್ನೆಯಷ್ಟೆ (ಮೇ.10) ಸುಪ್ರೀಂಕೋರ್ಟ್ ತಿಹಾರ್ ಜೈಲಿನಲ್ಲಿ ಬಂಧಿತರಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೋರಿದ್ದ ಮಧ್ಯಂತರ ಜಾಮೀನು ಅರ್ಜಿಗೆ ಅಸ್ತು ಎಂದಿದ್ದು, ಜೂನ್ 01ರವರೆಗೂ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು ಎಂದು ತೀರ್ಪು ನೀಡಿತು. ಸದ್ಯ ಈ ಬೆನ್ನಲ್ಲೇ ದೇಗುಲ ಬಳಿ ಪೂಜೆ ಸಲ್ಲಿಸಿ, ಬಿರುಸಿನ ಪ್ರಚಾರ ಪ್ರಾರಂಭಿಸಿರುವ ಕೇಜ್ರಿವಾಲ್, ಪ್ರಧಾನಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ‘ವರುಣ್ಗಾಂಧಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ’: ಮಗನ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಮೇನಕಾ ಗಾಂಧಿ
"ಸದ್ಯ ಎರಡು ರಾಜ್ಯಗಳಲ್ಲಿ ನಮ್ಮದು ಸಣ್ಣ ಪಕ್ಷವೇ ಇರಬಹುದು. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಎಪಿ ವಿರುದ್ಧ ತಿರುಗಿಬಿದ್ದಿದ್ದು, ನಮ್ಮ ಪಕ್ಷದ ನಾಲ್ವರು ಸಚಿವರನ್ನು ಒಬ್ಬರ ನಂತರ ಮತ್ತೊಬ್ಬರನ್ನು ಜೈಲಿಗೆ ಕಳುಹಿಸಿದರು. ಪಕ್ಷದ ನಾಲ್ಕು ಉನ್ನತ ನಾಯಕರನ್ನು ಬಂಧನಕ್ಕೆ ಒಳಪಡಿಸಿದರೆ, ಸಂಪೂರ್ಣ ಎಎಪಿ ಅಂತ್ಯ ಕಾಣುತ್ತದೆ ಎಂಬುದು ಅವರ ಲೆಕ್ಕಾಚಾರ" ಎಂದರು.
"ಪಿಎಂಗೆ ಗೊತ್ತಿದೆ, ಎಎಪಿಗೆ ಮಾತ್ರ ದೇಶದ ಭವಿಷ್ಯ ರೂಪಿಸಲು ಸಾಧ್ಯ ಎಂಬುದು. ಅದಕ್ಕಾಗಿಯೇ ನಮ್ಮ ಪಕ್ಷವನ್ನು ನೆಲಸಮ ಮಾಡಲು ನರೇಂದ್ರ ಮೋದಿ ಮುಂದಾಗಿದ್ದಾರೆ" ಎಂದು ಜನರನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭೇಟಿಯಲ್ಲೇ ಪ್ರಧಾನಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.