ನವದೆಹಲಿ: ಇಡೀ ದೇಶದಲ್ಲಿ ಸರಣಿ ಬಾಂಬ್ ದಾಳಿಗಳನ್ನು ನಡೆಸಿ ಅರಾಜಕತೆ ಸೃಷ್ಟಿಸಲು ವೈದ್ಯರ ಸೋಗಿನಲ್ಲಿದ್ದ ಕಿರಾತಕ ಉಗ್ರರು ಭಾರಿ ಸಂಚು ರೂಪಿಸಿದ್ದರು. ಯಾವಾಗ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಗೊಂಡಿತೋ ( Delhi Blast ) ನಂತರದ ತನಿಖೆಯಲ್ಲಿ ಉಗ್ರರ ಒಂದೊಂದೆ ಸಂಚು ಬಯಲಿಗೆ ಬರುತ್ತಿವೆ.
ಇಡೀ ದೇಶದಲ್ಲಿ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲು ಮಹಾ ಸಂಚು ಮಾಡಿದ್ದರು. ಅದಕ್ಕಾಗಿ ಉಗ್ರರ ಗುಂಪು ಸಕಲ ತಯಾರಿಯನ್ನೂ ಮಾಡಿಕೊಳ್ಳುತ್ತಿತ್ತು. ಆ ತಯಾರಿಗೆ ಅವರು ಬಳಸಿದ್ದು ಮಾತ್ರ ಹರಿಯಾಣದ ಪ್ರತಿಷ್ಠಿತ ಅಲ್-ಫಲಾಹ್ ವಿಶ್ವವಿದ್ಯಾಲಯ.
ಹೌದು, ಅಲ್-ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೊಳಕು ಹಾಸ್ಟೆಲ್ ಕೊಠಡಿಯಲ್ಲಿ ವೈದ್ಯರ ಸೋಗಿನಲ್ಲಿದ್ದ ಉಗ್ರರು ಒಟ್ಟಿಗೆ ಸೇರಿ ಸಂಚು ಮಾಡುತ್ತಿದ್ದರು. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸರಣಿ ದಾಳಿಗಳನ್ನು ನಡೆಸಲು ಪ್ರತಿದಿನ ಸಭೆ ಸೇರಿ ಚರ್ಚೆ ನಡೆಸುತ್ತಿದ್ದರು. ಯಾವಾಗ ಉಗ್ರರ ಸಂಚು ವಿಫಲವಾಯಿತೋ ಅಲ್ ಫಲಾಹ್ ಯೂನಿವರ್ಸಿಟಿ ಇದೀಗ ದೇಶದ ಗಮನ ಸೆಳೆದಿದೆ.
ಅಲ್ಲಿನ ಹುಡುಗರ ಹಾಸ್ಟೆಲ್ನ ಕಟ್ಟಡ 17ರ ಕೊಠಡಿ ಸಂಖ್ಯೆ 13 ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ರಹಸ್ಯ ಸಭೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರಲ್ಲಿ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನು ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.
ದೆಹಲಿ ಸ್ಫೋಟ ನಡೆದ ಅದೇ ದಿನ ಬೆಳಗ್ಗೆ ಅಲ್-ಫಲಾಹ್ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಡಾ. ಮುಜಾಮಿಲ್ ಶಕೀಲ್ ಎಂಬಾತನ ಬಾಡಿಗೆ ಮನೆಯಲ್ಲಿ ಬರೋಬ್ಬರಿ 2900 ಕೆಜಿ ತೂಕದ ಐಇಡಿ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು. ಅಲ್ಲದೆ, ಮುಜಾಮಿಲ್ನನ್ನು ಬಂಧಿಸಲಾಯಿತು.
ಇದನ್ನೂ ಓದಿ: ಮುಂಬೈ ತಂಡ ತೊರೆಯುತ್ತಾರಂತೆ ಅರ್ಜುನ್? ಸಚಿನ್ ಪುತ್ರನಿಗಾಗಿ ಮುಂದೆ ಬಂದ ಬಲಿಷ್ಠ ತಂಡವಿದು… IPL 2026
ಇದೀಷ್ಟೇ ಅಲ್ಲದೆ, ಭಾರತದಲ್ಲಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯ ಮಹಿಳಾ ಘಟಕವನ್ನು ಸ್ಥಾಪಿಸುವ ಹೊಣೆ ಹೊತ್ತಿದ್ದಳು ಎನ್ನಲಾದ ಹಾಗೂ ಅಲ್ ಫಲಾಹ್ ಯೂನಿವರ್ಸಿಟಿಯಲ್ಲಿ ವೈದ್ಯಳಾಗಿದ್ದ ಡಾ. ಶಾಹೀನ್ ಶಾಹೀದ್ ಎಂಬಾಕೆಯನ್ನೂ ಅದೇ ದಿನ ಬೆಳಗ್ಗೆ ಬಂಧಿಸಲಾಯಿತು. ಇಬ್ಬರನ್ನು ಬಂಧಿಸಿದ ಅದೇ ದಿನ ವೈದ್ಯನ ಸೋಗಿನಲ್ಲಿದ್ದ ಮತ್ತೊಬ್ಬ ಉಗ್ರ ಉಮರ್ ಕೆಂಪುಕೋಟೆಯ ಬಳಿ ಕಾರು ಸ್ಫೋಟ ಮಾಡಿದನು.
ಹಾಸ್ಟೆಲ್‌ನಲ್ಲಿನ ಕೊಠಡಿ ಸಂಖ್ಯೆ 13 ಪುಲ್ವಾಮಾದ ಡಾ. ಮುಜಮ್ಮಿಲ್‌ಗೆ ಸೇರಿತ್ತು. ಆ ಕೋಣೆಯೊಳಗೆ ಆತ ಇನ್ನಿತರ ಮೂಲಭೂತವಾದಿ ವೈದ್ಯರನ್ನು ಭೇಟಿಯಾಗಿ ದೆಹಲಿ ಮತ್ತು ಹತ್ತಿರದ ರಾಜ್ಯಗಳಲ್ಲಿ ಸಂಘಟಿತ ಸ್ಫೋಟಗಳನ್ನು ನಡೆಸಲು ಸಂಚು ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ದಿನನಿತ್ಯ ಒಂದಲ್ಲ ಒಂದು ಸ್ಫೋಟಕ ಮಾಹಿತಿಗಳು ಹೊರಬರುತ್ತಲೇ ಇವೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).