ನ್ಯೂಸ್

ಮಹಿಳಾ ಕ್ರಿಕೆಟ್​ ಆಟಗಾರ್ತಿ ದೀಪ್ತಿ ಶರ್ಮಾಗೆ ಡಿಎಸ್‌ಪಿ ಹುದ್ಧೆ; ನಗದು ಬಹುಮಾನ ನೀಡಿ ಗೌರವ

ಮೋಹನ್​ ಶೆಟ್ಟಿ

ಉತ್ತರಪ್ರದೇಶ: ಭಾರತೀಯ ಮಹಿಳಾ ಕ್ರಿಕೆಟ್​ ತಂಡದಲ್ಲಿ ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿರುವ ದೀಪ್ತಿ ಶರ್ಮಾ ಸಾಧನೆಯನ್ನು ಗುರುತಿಸಿದ ಉತ್ತರಪ್ರದೇಶ ಸರ್ಕಾರ, ಅವರಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ನೀಡಿ ಗೌರವಿಸಿದೆ.

ಆಗ್ರಾದ ಆಲ್‌ರೌಂಡರ್ ಕ್ರಿಕೆಟಿಗರಾದ ದೀಪ್ತಿ ಶರ್ಮಾ ಅವರಿಗೆ ಉತ್ತರ ಪ್ರದೇಶ ಸರ್ಕಾರವು ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಹುದ್ದೆಯನ್ನು ನೀಡುವುದರ ಜತೆಗೆ ಮೂರು ಕೋಟಿ ರೂ. ನಗದು ಹಣವನ್ನು ಬಹುಮಾನವಾಗಿ ಕೊಟ್ಟು ಗೌರವಿಸಿದೆ. ರಾಷ್ಟ್ರೀಯ ಮಹಿಳಾ ತಂಡಕ್ಕೆ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ 26 ವರ್ಷದ ದೀಪ್ತಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವೇದಿಕೆಯಲ್ಲಿ ಸನ್ಮಾನಿಸಿದರು.

ದೀಪ್ತಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ಯೋಗಿ ಆದಿತ್ಯನಾಥ್, ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಗಳಿಸಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಆಗ್ರಾ ಮೂಲದ ಅನೇಕ ಕ್ರೀಡಾಪಟುಗಳು ಕ್ರೀಡೆಗೆ ನೀಡಿದ ಕೊಡುಗೆಗಳನ್ನು ಗೌರವಿಸಿ, ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಪ್ಯಾರಾ ಅಥ್ಲೀಟ್‌ಗಳಾದ ಜತಿನ್ ಕುಶ್ವಾಹಾ ಮತ್ತು ಯಶ್ ಕುಮಾರ್​ಗೆ ತಲಾ 5 ಲಕ್ಷ ರೂ.ಗಳನ್ನು ನೀಡಿದರೆ, ಸ್ನೂಕರ್ ಚಾಂಪಿಯನ್ ಆದ ಪರಾಸ್ ಗುಪ್ತಾ ಮತ್ತು ರೈಫಲ್ ಶೂಟರ್ ಆಯುಷಿ ಗುಪ್ತಾ ಅವರಿಗೆ ಗೌರವಿಸಲಾಯಿತು,(ಏಜೆನ್ಸೀಸ್).