ನ್ಯೂಸ್

ಕರೊನಾ ಸೋಂಕು ಕಡಿಮೆಯಾದರೆ ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಗೆ ತೊಡಕು!

ನ್ಯೂಯಾರ್ಕ್​: ವಿಶ್ವವನ್ನೇ ಬಾಧಿಸುತ್ತಿರುವ ಕರೊನಾ ಸೋಂಕು ಕೆಲದಿನಗಳಿಂದ ಇಳಿಮುಖವಾಗುತ್ತಿದೆ. ಇದೇ ರೀತಿ ಅದು ಕಡಿಮೆಯಾಗುವುದು ಮುಂದುವರಿದರೆ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ತೊಡಕಾಗುತ್ತದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ದಿಷ್ಟವಾದ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ, ಸಂಶೋಧನೆ ನಡೆಯುತ್ತಿರುವ ಹೆಚ್ಚಿನ ಸಂಖ್ಯೆಯ ಸೋಂಕಿತರು ಸಿಗದೆ, ಚುಚ್ಚುಮದ್ದಿನ ಪರೀಕ್ಷೆಗೆ ತೊಡಕು ಉಂಟಾಗಲಿದೆ ಎಂದು ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರಿಗೆ ಸಹಕರಿಸುತ್ತಿರುವ ಔಷಧ ಕಂಪನಿ ಅಸ್ಟ್ರಾಜೆಂಕಾದ ಸಿಇಒ ಪ್ಯಾಸ್ಕಲ್​ ಸೋರಿಯಾಟ್​ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯ ಆರೋಗ್ಯವಂತ ಜನರಲ್ಲಿ ಕರೊನಾ ಸೋಂಕು ಉಂಟು ಮಾಡಿ, ಪರೀಕ್ಷೆ ಮುಂದುವರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.

ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ. ಯುರೋಪ್​ನಲ್ಲಿ ಈಗಾಗಲೆ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಅಮೆರಿಕ ಮತ್ತು ಬ್ರಿಟನ್​ನಲ್ಲಿ ಹೆಚ್ಚಾಗಿದೆ. ಆದರೆ ಅಲ್ಲಿ ಕೂಡ ಸದ್ಯದಲ್ಲೇ ಸೋಂಕಿತರ ಸಂಖ್ಯೆ ಕಡಿಮೆಯಾಗುವುದು ನಿಶ್ಚಿತ. ಹಾಗಾಗಿ, ಸಂಶೋಧನೆಗೆ ತೊಡಕಾಗುವ ಸಾಧ್ಯತೆ ಇರುವುದರಿಂದ, ಸಂಶೋಧನೆಗಳನ್ನು ತ್ವರಿತವಾಗಿ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಿವರಿಸಿದ್ದಾರೆ.

ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರ ಜತೆಗೆ ಸ್ಯಾನೋಫಿ, ಜಾನ್ಸನ್​ ಆ್ಯಂಡ್​ ಜಾನ್ಸನ್​, ಗ್ಲಾಕ್ಸೋಸ್ಮಿತ್​ಕ್ಲೈನ್​ ಮತ್ತು ಫೈಜರ್​ ಜತೆ ಅಸ್ಟ್ರಾಜೆನೆಕಾ ಕೂಡ ಶ್ರಮಿಸುತ್ತಿದೆ.

ವಿಶ್ವದ ಹಲವು ರಾಷ್ಟ್ರಗಳು ಲಾಕ್​ಡೌನ್​ ಮೂಲಕ ಕರೊನಾ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಾರಾದರೂ, ಈ ಸೋಂಕುರಹಿತ ವಾತಾವರಣದಲ್ಲಿ ಎಂದಿನಂತೆ ಮುಕ್ತವಾಗಿ ಜನಜೀವನ ನಡೆಯುವಂತೆ ಮಾಡಲು ಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ಎಲ್ಲ ರಾಷ್ಟ್ರಗಳು ಒತ್ತು ನೀಡುತ್ತಿವೆ.