ನ್ಯೂಸ್

ಚೊಚ್ಚಲ ಚಿತ್ರ ಬಿಡುಗಡೆಗೂ ಮುನ್ನವೇ ಬೈಕ್​ ಅಪಘಾತದಲ್ಲಿ ದುರಂತ ಸಾವಿಗೀಡಾದ ಯುವ ನಿರ್ದೇಶಕ

ಚೆನ್ನೈ: ತಮಿಳು ಚಿತ್ರರಂಗ (ಕಾಲಿವುಡ್​)ದ ಯುವ ನಿರ್ದೇಶಕ ಎ.ವಿ. ಅರುಣ್​ ಪ್ರಶಾಂತ್​ ಅವರು ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಕೊಯಮತ್ತೂರಿನಿಂದ ಮೆಟ್ಟುಪಾಳ್ಯಂಗೆ ಪ್ರಯಾಣ ಮಾಡುವಾಗ ಈ ದುರ್ಘಟನೆ ನಡೆದಿದೆ.

ಪ್ರಶಾಂತ್​ ನಿರ್ದೇಶನದ ಚೊಚ್ಚಲ ಚಿತ್ರ "4ಜಿ" ಬಿಡುಗಡೆ ದಿನಾಂಕಕ್ಕೆ ಎದುರು ನೋಡಲಾಗುತ್ತಿತ್ತು. ಆದರೆ, ಚಿತ್ರ ಬಿಡುಗಡೆಗೂ ಮುನ್ನವೇ ವಿಧಿಯಾಟಕ್ಕೆ ಪ್ರಶಾಂತ್​ ಬಲಿಯಾಗಿದ್ದಾರೆ. 4ಜಿ ಚಿತ್ರದಲ್ಲಿ ಸಂಗೀತ ಸಂಯೋಜಕ ಹಾಗೂ ನಟ ಜಿ.ವಿ. ಪ್ರಕಾಶ್​ ಕುಮಾರ್​ ನಾಯಕನಾಗಿ ಅಭಿನಯಿಸಿದ್ದಾರೆ.

ಅರುಣ್​ ಪ್ರಶಾಂತ್​ ಅವರು ಕಾಲಿವುಡ್​ಗೆ ಎಂದಿರನ್​, ಐ, ಅನಿಯನ್​ ಹಾಗೂ 2.0 ನಂತಹ ಅದ್ಭುತ ಚಿತ್ರಗಳನ್ನು ನೀಡಿದ ಪ್ರಖ್ಯಾತ ನಿರ್ದೇಶಕ ಶಂಕರ್​ ಅವರ ಶಿಷ್ಯ. ಐ ಚಿತ್ರದಲ್ಲಿ ಶಂಕರ್​ ಅವರಿಗೆ ಸಹಾಯಕ ನಿರ್ದೇಶಕರಾಗಿ ಪ್ರಶಾಂತ್​ ಕೆಲಸ ಮಾಡಿದ್ದರು.

ಕೊಯಮತ್ತೂರು ಮೂಲದವರಾದ ಪ್ರಶಾಂತ್ ಕರೊನಾ​ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಉಳಿದಿದ್ದರು. ಶುಕ್ರವಾರ ಕೊಯಮತ್ತೂರಿನ ಅಣ್ಣೂರಿನಲ್ಲಿರುವ ತನ್ನ ನಿವಾಸದಿಂದ ಬೈಕ್​ನಲ್ಲಿ ಮೆಟ್ಟುಪಾಳ್ಯಂಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬೈಕ್​ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯುವ ನಿರ್ದೇಶಕ ಪ್ರಶಾಂತ್​ ಅಕಾಲಿಕ ಮರಣ ಕೇಳಿ ಆಘಾತಗೊಂಡ ಸಿನಿಮಾ ಸಮುದಾಯ ಮೃತನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಶಂಕರ್​ ಸಹ ಟ್ವೀಟ್​ ಮಾಡಿ ಕಂಬನಿ ಮಿಡಿದ್ದಿದ್ದು, ದಿಢೀರ್​ ಸಾವಿನಿಂದ ಹೃದಯ ಬಿರಿದಿದೆ. ಅರುಣ್​ ನೀನು ಶ್ರಮ ಜೀವಿ ಹಾಗೂ ಪಾಸಿಟಿವ್​ ವ್ಯಕ್ತಿಯಾಗಿದ್ದೆ. ನಿನ್ನನ್ನು ಕಳೆದುಕೊಂಡ ಕುಟುಂಬ ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)