ನ್ಯೂಸ್

ಬಿಸಿ ಗಾಳಿಗೆ ತಪ್ಪದ ಅನಾಹುತ! ಕಳೆದ 36 ಗಂಟೆಗಳಲ್ಲಿ 45 ಜನರು ಮೃತ, 87ಕ್ಕೆ ತಲುಪಿದ ಸಾವಿನ ಸಂಖ್ಯೆ

ನವದೆಹಲಿ: ಕಳೆದ 36 ಗಂಟೆಗಳಲ್ಲಿ 45ಕ್ಕೂ ಹೆಚ್ಚು ಜನರು ದೇಶದಲ್ಲಿ ಗರಿಷ್ಠ ತಾಪಮಾನ ಏರಿಕೆ ತಾಳಲಾರದೆ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 87ಕ್ಕೆ ತಲುಪಿದೆ. ಈ ಸಂಗತಿ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಜೂನ್ ಪೂರ ಬಿಸಿ ಗಾಳಿ ಅಧಿಕವಾಗಿಯೇ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೂಡ ಮಾಹಿತಿ ನೀಡಿದೆ.

ಮರೆಯಲಾರದ ಬೇಸಿಗೆ ಕಾಲ ಎನ್ನುವಂತೆ ಇದಾಗಿದ್ದು, ಬಿಸಿಲ ತಾಪಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರು ಮನೆಯೊಳಗೂ ಇರಲಾರದೆ, ಹೊರಗೂ ಬರಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತ್ಯೇಕವಾಗಿ ಉತ್ತರ ಭಾರತದಲ್ಲಿ ಬಿಸಿ ಗಾಳಿ ಹೆಚ್ಚಾಗಿದ್ದು, ಕೆಲವೆಡೆ 50 ಡಿಗ್ರಿ ಸೆಲ್ಸಿಯಸ್​ ತಾಪಮಾನವನ್ನು ಸಹ ಮೀರಿ ಹೋಗಿದೆ. ಪಶ್ಚಿಮ ಒಡಿಶಾದಲ್ಲಿ ಶಾಖಾಘಾತದಿಂದ 19 ಜನರು ಸಾವನ್ನಪ್ಪಿದ್ದಾರೆ.

ಇನ್ನು ಉತ್ತರಪ್ರದೇಶದಲ್ಲಿ ಒಂದೇ ದಿನ 16 ಮಂದಿ ಬಿಸಿಲ ತಾಪಮಾನದಲ್ಲಿ ಕಂಡುಬಂದ ಹೆಚ್ಚಳದಿಂದ ಮೃತಪಟ್ಟಿದ್ದಾರೆ. ಬಿಹಾರದಲ್ಲಿ ಐದು ಮಂದಿ, ರಾಜಸ್ಥಾನದಲ್ಲಿ ನಾಲ್ವರು ಮತ್ತು ಪಂಜಾಬ್‌ನಲ್ಲಿ ಒಬ್ಬರು ತೀವ್ರ ಶಾಖಕ್ಕೆ ಬಲಿಯಾಗಿದ್ದಾರೆ. ಸರ್ಕಾರವು ಶಾಖದ ಅಲೆಯನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಬೇಕೇ? ಎಂಬುದೇ ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡಿದ್ದು, ಸಾವಿನ ಸಂಖ್ಯೆಯಲ್ಲಿ ಹಠಾತ್ ಏರಿಕೆಗೆ ಅತ್ಯಂತ ಹೆಚ್ಚಿನ ತಾಪಮಾನವೇ ಕಾರಣವೆಂದು ತಜ್ಞರು ತಿಳಿಸಿದ್ದಾರೆ.

ಜಾರ್ಸುಗುಡಾದಲ್ಲಿ ಸಾವನ್ನಪ್ಪಿದ 9 ಜನರ ಪೈಕಿ ಏಳು ಮಂದಿ ಕೈಗಾರಿಕಾ ಟೌನ್​ ಹಾದುಹೋಗುವ ಟ್ರಕ್ ಚಾಲಕರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).