ನ್ಯೂಸ್

ಸರಿಯಾಗಿ ವಿದ್ಯುತ್​ ಕೊಡಿ ಅಂದ್ರೆ ಶಾಸಕರ ಬರ್ತಡೇ ಇದೆ ಎಂದ ಜಗಳೂರು AEEಗೆ ರೈತರಿಂದ ಬಿತ್ತು ಗೂಸಾ!?

ದಾವಣಗೆರೆ: ನೀರಾವರಿಗೆ ಸರಿಯಾಗಿ ವಿದ್ಯುತ್​ ನೀಡಿ ಸ್ವಾಮಿ ಎಂದು ಕೇಳದ ಬಂದಿದ್ದ ನೂರಾರು ರೈತರಿಗೆ ಉಡಾಫೆ ಉತ್ತರ ಕೊಟ್ಟ ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಕೆಇಬಿ ಕಛೇರಿ ಬಳಿ ನಡೆದಿದೆ.

ಜಗಳೂರಿನ ಎಇಇ ಗಿರೀಶ್ ನಾಯ್ಕ್​ಗೆ ರೈತರು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅಧಿಕಾರಿಗೆ ರೈತರಿಂದ ಧರ್ಮದೇಟು ಬಿದ್ದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಹೊಡಿಬೇಡಿ...ಹೊಡಿಬೇಡಿ ಎಂದು ಕೆಲವರು ಕೂಗಿಕೊಂಡಿದ್ದಾರೆ.

ಜಮೀನಿಗೆ ನೀರು ಹಾಯಿಸಲು ಪಂಪ್ ಸೆಟ್ ಅವಶ್ಯಕತೆ ಇದ್ದು, ಸರಿಯಾಗಿ ವಿದ್ಯುತ್ ನೀಡಿ ಸ್ವಾಮಿ, ನಮಗೆ ಬೆಳೆ ಬೆಳೆಯಲು ತುಂಬಾ ತೊಂದರೆಯಾಗ್ತಿದೆ ಎಂದು ಹೇಳಲು ರೈತರು ಬಂದಿದ್ದರು. ಆದರೆ, ಸಮಾಧಾನಕರ ಅಥವಾ ಭರವಸೆ ಉತ್ತರವನ್ನು ನೀಡದ ಅಧಿಕಾರಿ, ರೈತರ ಮುಂದೆ ನಾಲಿಗೆ ಹರಿಬಿಟ್ಟಿದ್ದಾರೆ. ಶಾಸಕ ಎಸ್.ವಿ.ರಾಮಚಂದ್ರ ಅವರ ಬರ್ತಡೇ ಇದೆ, ಸುಮ್ಮಿನಿರಿ ಎಂದು ಏರು ಧ್ವನಿಯಲ್ಲಿ ಅಧಿಕಾರಿ ಗದರಿದ್ದಾರೆ.

ಎಇಇ ಗಿರೀಶ್ ನಾಯ್ಕ್ ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ರೈತರು, ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಂಭವಿಸಿದ ತಳ್ಳಾಟದಲ್ಲಿ ಅಧಿಕಾರಿಗೆ ಗೂಸಾ ಬಿದ್ದಿದೆ ಎನ್ನಲಾಗಿದೆ‌. ಅಧಿಕಾರಿಗೆ ರೈತರ ಬವಣೆಗಿಂತ ಶಾಸಕನ ಬರ್ತಡೇಯೇ ಹೆಚ್ಚಾಯ್ತಾ? ರೈತರಿದ್ದರೆ ನಾವು ಎಂಬ ಕನಿಷ್ಠ ಜ್ಞಾನವು ಅರ್ಥವಾಗಲಿಲ್ವಾ ಎಂಬ ಪ್ರಶ್ನೆ ಮೂಡಿದೆ. (ದಿಗ್ವಿಜಯ ನ್ಯೂಸ್​)