ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರ ಹಾವಳಿ ಮಿತಿ ಮೀರುತ್ತಿದ್ದು, ದಿನಕ್ಕೆ ಸಾವಿರಾರು ದೂರುಗಳು ದಾಖಲಾಗುತ್ತಿರುತ್ತವೆ. ಸೈಬರ್ ವಂಚನೆಗಳಿಂದ ಜನರು ಜಾಗರೂಕಗೊಳ್ಳುತ್ತಿದ್ದಂತೆ ಖದೀಮರು ಅನ್ಯ ಮಾರ್ಗಗಳನ್ನು ಹುಡುಕುತ್ತಿದ್ದು, ಇದೀಗ ಇದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಎಚ್ಚರವಿರುವಂತೆ ಪೊಲೀಸರು ಜನರಿಗೆ ಎಚ್ಚರಿಸಿದ್ದಾರೆ.
ದಿನ ಕಳೆದಂತೆ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಆಧಾರ್ ಕಾರ್ಡ್ ಬಳಸಿಕೊಂಡು ಸಾರ್ವಜನಿಕರ ಹಣ ಲಪಟಾಯಿಸುವುದು, ಹಾಗೂ ಅಶ್ಲೀಲ ಪೋಟೊ, ವಿಡಿಯೋ ತೋರಿಸಿ ಜನರಿಗೆ ಬ್ಲಾಕ್ ಮೇಲ್ ಮಾಡುವುದು. ವಿಡಿಯೋ ಕರೆ ಮಾಡಿ ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು. ಕೆಲಸ ಕೊಡಿಸುವುದು, ಗಿಪ್ಟ್ ಹೆಸರಲ್ಲಿ ಮಕ್ಮಲ್ ಟೋಪಿ ಹಾಕಿ ವಂಚಿಸಲಾಗುತ್ತಿತ್ತು. ಇದೀಗ ರಿಜಿಸ್ಟರ್ ಪೋಸ್ಟ್ ಮೂಲಕ ಸೈಬರ್ ವಂಚಕರು ಜನರ ಹಣವನ್ನು ಲಪಟಾಯಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಸಿಕ್ಕ ಅವಕಾಶವನ್ನು ಬಳಸಿಕೊಳ್ಳದ ನೀವು ಯಾವ ಸೀಮೆಯ ಚಾಂಪಿಯನ್ಸ್; ಹೀನಾಯವಾಗಿ ಟ್ರೋಲ್ ಆದ ಯಂಗ್ ಇಂಡಿಯಾ
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೆ ಬಂದು ತಲುಪುತ್ತದೆ. ಈ ಪೋಸ್ಟ್ಅನ್ನು ತೆರೆದ ಕೂಡಲೇ ಭಾರತ ಸರ್ಕಾರದ ಲಾಂಛನವಿರುವ ಕೂಪನ್ ಹಾಗೂ ಅಪ್ಲಿಕೇಷನ್ ಫಾರ್ಮ್ ಒಂದು ಇರುತ್ತದೆ. ಬಳಿಕ ಕೂಪನ್ ಸ್ಕ್ರಾಚ್ ಮಾಡಿ ಕಾರನ್ನು ಗೆಲ್ಲಿ ಎಂದು ಕೂಪನ್ ಮೇಲೆ ಬರೆದಿರುತ್ತದೆ, ಕೂಪನ್ ಸ್ಕ್ರಾಚ್ ಮಾಡಿದಾಗ ನೀವು 12, 80, 000 ರೂಪಾಯಿ ಹಣ ಗೆದ್ದಿದ್ದೀರಿ ಎಂದು ತೋರಿಸಿ ಅದರ ಕೆಳಗಡೆ ಎಸ್ಎಂಎಸ್ ಕೋಡ್ ಒಂದು ಬರೆದಿರುತ್ತದೆ. ವಂಚಕರು ಅದೇ ಕಾರ್ಡಲ್ಲಿ ಸ್ಕ್ಯಾನರ್ ಅಳವಡಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದರೆ ಅಥವಾ ಹೆಲ್ಫ್ ಲೈನ್ ನಂಬರ್ಗೆ ಕರೆ ಮಾಡಿದರೆ ನಿಮ್ಮ ಹಣ ಖದೀಮರ ಪಾಲಾಗುತ್ತದೆ. ಜನರನ್ನು ವಂಚಿಲು ಸೈಬರ್ ಖದೀಮರು ಈ ಮಾರ್ಗವನ್ನು ಕಂಡುಕೊಂಡಿದ್ದು, ಎಚ್ಚರವಿರುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರು ಹೇಳಿರುವ ಪ್ರಕಾರ ಈ ರಿಜಿಸ್ಟರ್ ಪೋಸ್ಟ್ಗಳನ್ನು ಕಲ್ಕತ್ತಾ ವಿಳಾಸದಿಂದ ರವಾನಿಸಲಾಗುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಿನ ವಿವಿಧೆಡೆ ಈ ಬಗ್ಗೆ ದೂರುಗಳು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೈಬರ್ ಖದೀಮರ ಗಾಳಕೆ ಬೀಳದೆ ಎಚ್ಚರವಿರುವಂತೆ ಜನರಿಗೆ ಸೂಚಿಸಿದ್ದಾರೆ.