ನ್ಯೂಸ್

ಫೇಸ್​ಬುಕ್​ ಸ್ನೇಹಿತೆ, ಪ್ರೀತಿಯ ಕೂಪ! ಒಂದು ಹೆಣ್ಣಿನ ಮಾತಿಗೆ 52 ಲಕ್ಷ ರೂ. ಕಳೆದುಕೊಂಡ ಉದ್ಯಮಿ | Cyber Fraud

Cyber Fraud:.ಫೇಸ್​ಬುಕ್​ ಸ್ನೇಹಿತೆಯ ಲವ್ವಿಡವ್ವಿ ಮಾತುಗಳಿಗೆ ಮರುಳಾದ 65 ವರ್ಷದ ಉದ್ಯಮಿಯೊಬ್ಬರು, ಬರೋಬ್ಬರಿ 52 ಲಕ್ಷ ರೂ. ಕಳೆದುಕೊಂಡ ಘಟನೆ ಮುಂಬೈನಲ್ಲಿ ವರದಿಯಾಗಿದೆ.

52 ಲಕ್ಷ ರೂ. ಕಳೆದುಕೊಂಡ ಘಟನೆ ಸದ್ಯ ಮುಂಬೈ ಪಶ್ಚಿಮ ಸೈಬರ್ ಪೊಲೀಸರನ್ನೇ ಅಚ್ಚರಿಗೊಳಿಸಿದೆ. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರನ್ನು ಸೈಬರ್​ ಪ್ರಕರಣವನ್ನು ಆಳವಾಗಿ ಪರಿಶೀಲಿಸಿದಾಗ ಇದೊಂದು ಹನಿಟ್ರ್ಯಾಪ್ ಎಂಬುದು ಸ್ಪಷ್ಟವಾಗಿದೆ. ವೃದ್ಧ ಉದ್ಯಮಿಯನ್ನು ಪ್ರೀತಿ ಹೆಸರಿನಲ್ಲಿ ತನ್ನ ಮೋಸದ ಜಾಲಕ್ಕೆ ಕೆಡವಿಕೊಂಡ ಯುವತಿ, ಲಾಭ ತಂದುಕೊಡುವ ನೆಪದಲ್ಲಿ ಭಾರೀ ಹಣವನ್ನು ಲಪಟಾಯಿಸಿದ್ದಾಳೆ.

ಪ್ರೀತಿಯ ಮಾತುಗಳಿಂದಲೇ ನಡೆಯಿತು ಮೋಸ!

ಈ ವರ್ಷದ ಜೂನ್‌ನಲ್ಲಿ, ದೂರುದಾರರಿಗೆ ಸುಪ್ರಿತಾ ಶರ್ಮಾ ಎಂಬ ಮಹಿಳೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತು. ಆಕೆಯ ಪ್ರೊಫೈಲ್‌ನಲ್ಲಿ ಹಾಂಗ್ ಕಾಂಗ್‌ನ ಐಬಿಎಂನಲ್ಲಿ ಹಿರಿಯ ಹುದ್ದೆಯಲ್ಲಿರುವುದಾಗಿ ಮಹಿಳೆ ಉಲ್ಲೇಖಿಸಿದ್ದಳು. ಯುವತಿ ಅಂದಕ್ಕೆ ಮರುಳಾದ ಉದ್ಯಮಿ, ಬಂದ ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಿದರು. ಬಳಿಕ ಇಬ್ಬರ ನಡುವೆ ದೀರ್ಘ ಕಾಲದ ಸಂಭಾಷಣೆ ನಡೆಯಿತು. ಜಪಾನ್‌ನಲ್ಲಿ ಐಬಿಎಂನ ಕ್ರಿಪ್ಟೋ ಟ್ರೇಡಿಂಗ್ ವಿಭಾಗಕ್ಕೆ ಸೇರಿರುವುದಾಗಿ ಸುಪ್ರಿತಾ ಸಂತ್ರಸ್ತನಿಗೆ ಹೇಳಿದ್ದಳು. ಮೊದಲಿಗೆ ತನ್ನ ಮೇಲೆ ನಂಬಿಕೆ ಬಲವಾಗುವವರೆಗೆ ಪ್ರೀತಿಯ ಮಾತುಗಳನ್ನಾಡಿದ ಸುಪ್ರಿತಾ, ನಂತರದಲ್ಲಿ ಬಿಟ್​ಕಾಯಿನ್​ನಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಳು.

ದುಡ್ಡು ಹೋದ ಮೇಲೆ ಅರಿವು

ಮೊದಲಿಗೆ ಉದ್ಯಮಿ ಒಪ್ಪಿಲ್ಲ. ಆ ನಂತರ ಲವ್ವಿಡವ್ವಿ ನೆಪದಲ್ಲಿ ಆತನನ್ನು ಹಳ್ಳಕ್ಕೆ ಬೀಳಿಸಿಕೊಂಡ ಕಿರಾತಕಿ, ಕ್ರಿಪ್ಟೋ ಟ್ರೇಡಿಂಗ್ ವೆಬ್‌ಸೈಟ್‌ನ ಲಿಂಕ್ ಶೇರ್ ಮಾಡಿದ್ದಳು. ಜೂನ್ ಮತ್ತು ಜುಲೈ 17ರ ನಡುವೆ ಒಟ್ಟು 52 ಲಕ್ಷ ರೂ. ಹಣವನ್ನು ವೃದ್ಧ, ಯುವತಿಯ ಖಾತೆಗೆ ವರ್ಗಾಯಿಸಿದ್ದ. ಇದಾದ ಬಳಿಕ ತಾನು ಮೋಸ ಹೋಗಿದ್ದೇನೆ ಎಂಬುದನ್ನು ಅರಿತ ಕೂಡಲೇ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಗೆ (1930) ಸಂಪರ್ಕಿಸಿದ್ದಾರೆ.

ಪ್ರಕರಣದ ಬೆನ್ನತ್ತಿದ ಪೊಲೀಸರು, ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳು, 66C 66D, ಭಾರತೀಯ ದಂಡ ಸಂಹಿತೆಯ BNS ಸೆಕ್ಷನ್‌ಗಳು 318(4), 319(2), 336(2), 336(3), 338, 340(2), ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇದನ್ನು ಹನಿಟ್ರ್ಯಾಪ್ ಎಂದಿದ್ದು, ಭಾರಿ ಲಾಭದ ಭರವಸೆ ನೀಡಿ ಮೋಸ ಮಾಡಿರುವುದು ಸ್ಪಷ್ಟ ಎಂಬುದನ್ನು ಕಂಡುಕೊಂಡಿದ್ದಾರೆ. ಇಂತಹ ಸೈಬರ್ ಅಪರಾಧಗಳ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಲು ಪೊಲೀಸರು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).