ನ್ಯೂಸ್

ಉತ್ತರಪ್ರದೇಶ ಮೂಲದ ನಕಲಿ ಶಾಪಿಂಗ್ ವೆಬ್‌ಸೈಟ್ ವಂಚಕ ಬನಶಂಕರಿಯಲ್ಲಿದ್ದ, ಸೈಬರಾಬಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದ..

ನೂರಾರು ಮಂದಿಗೆ ವಂಚನೆ, 40 ಲಕ್ಷ ರೂಪಾಯಿ ಜಪ್ತಿ

ಬೆಂಗಳೂರು: ಆನ್‌ಲೈನ್ ಶಾಪಿಂಗ್, ವಿದೇಶದಲ್ಲಿ ನೌಕರಿ, ವೀಸಾ ಕೊಡಿಸುವ ನಕಲಿ ವೆಬ್‌ಸೈಟ್ ತೆರೆದು ಸಾವಿರಾರು ಮಂದಿಗೆ ವಂಚಿಸುತ್ತಿದ್ದ ಸೈಬರ್ ಕಳ್ಳನನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿ ನೆಲೆಸಿದ್ದ, ಉತ್ತರಪ್ರದೇಶ ಮೂಲದ ರಿಷಭ್ ಉಪಾಧ್ಯಾಯ ಅಲಿಯಾಸ್ ಚಂದನ್ (30) ಬಂಧಿತ. ಮತ್ತೊಬ್ಬ ಆರೋಪಿ, ಪಂಜಾಬ್ ಮೂಲದ ರಾಹುಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತನಿಂದ 2 ಲ್ಯಾಪ್‌ಟಾಪ್, 3 ಮೊಬೈಲ್ ಫೋನ್​, 20 ಡೆಬಿಟ್ ಕಾರ್ಡ್, 6 ಬ್ಯಾಂಕ್ ಪಾಸ್‌ಬುಕ್ ಮತ್ತು 40 ಲಕ್ಷ ರೂ. ಜಪ್ತಿ ಮಾಡಿರುವುದಾಗಿ ತೆಲಂಗಾಣದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ತಿಳಿಸಿದ್ದಾರೆ.

ಉತ್ತರಪ್ರದೇಶ ಮೂಲದ ರಿಷಭ್, ವಾರಾಣಸಿಯಲ್ಲಿ ಬಿಎಸ್‌ಸಿ ಮುಗಿಸಿ ಎಂಬಿಎ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಖಾಸಗಿ ಕಾಲೇಜಿನಲ್ಲಿ ಇಂಟರ್‌ನ್ಯಾಷನಲ್​ ಮಾರ್ಕೆಟಿಂಗ್ ಪದವಿಯನ್ನು 2012ರಲ್ಲಿ ಮುಗಿಸಿದ್ದ. ಆನಂತರ ಬನಶಂಕರಿಯ ಪೇಯಿಂಗ್ ಗೆಸ್ಟ್‌ನಲ್ಲಿ ಉಳಿದುಕೊಂಡು ಬಿಪಿಒ ಕಂಪನಿಗೆ ಕೆಲಸಕ್ಕೆ ಸೇರಿ ವೆಬ್‌ಸೈಟ್ ಅಭಿವೃದ್ಧಿ ಕೋರ್ಸ್ ಸಹ ಮುಗಿಸಿಕೊಂಡಿದ್ದ. ಇದಾದ ಮೇಲೆ ಸೈಬರ್ ಕಳ್ಳರ ಸಹವಾಸದಿಂದ ವಂಚನೆಗೆ ಇಳಿದಿದ್ದ. ಜನವರಿಯಲ್ಲಿ ಎರಡು ನಕಲಿ ಶಾಪಿಂಗ್ ವೆಬ್‌ಸೈಟ್ ತೆರೆದು ಫರ್ನಿಚರ್ ಮತ್ತು ದಿನಬಳಕೆ ವಸ್ತುಗಳ ಮಾರಾಟದ ಜಾಹೀರಾತು ನೀಡಿದ್ದ. ಈತನ ಸಹಚರ ರಾಹುಲ್, ಈ ನಕಲಿ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿರುವ ವಸ್ತುಗಳನ್ನು ಗೂಗಲ್, ಫೇಸ್‌ಬುಕ್, ಟ್ವಿಟರ್ ಇನ್ನಿತರ ಜಾಲತಾಣಗಳಲ್ಲಿ ಮಾರ್ಕೆಟಿಂಗ್ ಮಾಡುತ್ತಿದ್ದ. ರಿಯಾಯಿತಿ ದರದಲ್ಲಿ ಮಾರಾಟದ ಆಮಿಷವೊಡ್ಡಿ ಗ್ರಾಹರನ್ನು ಸೆಳೆಯುವ ಕೆಲಸವನ್ನು ರಾಹುಲ್ ಮಾಡುತ್ತಿದ್ದ.

ಕರೊನಾ ಎರಡನೇ ಅಲೆ ಕರ್ಫ್ಯೂ ಸಮಯವನ್ನೇ ಹೆಚ್ಚು ದುರುಪಯೋಗ ಪಡಿಸಿಕೊಂಡು ಅಮಾಯಕರಿಂದ ಆನ್‌ಲೈನ್‌ನಲ್ಲಿ ಹಣ ಜಮೆ ಮಾಡಿಸಿಕೊಂಡು ಸರಕು ಕೊಡದೆ ವಂಚನೆ ಮಾಡಿದ್ದರು. ಇದೇ ರೀತಿ ಹೈದರಾಬಾದ್ ಮೂಲದ ಸಾಫ್ಟ್​ವೇರ್​ ಇಂಜಿನಿಯರ್‌ನಿಂದ ಹಣ ಪಡೆದು ವಂಚನೆ ಮಾಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಯ ವೆಬ್‌ಸೈಟ್ ಮತ್ತು ಮೊಬೈಲ್ ಫೋನ್​ ನಂಬರ್, ಬ್ಯಾಂಕ್ ಖಾತೆಗಳ ಜಾಡು ಹಿಡಿದಾಗ ಬೆಂಗಳೂರಿನ ವಿಳಾಸ ಪತ್ತೆಯಾಗಿದ್ದು, ವೈಟ್‌ಫೀಲ್ಡ್‌ನಲ್ಲಿ ರಿಷಭ್‌ನನ್ನು ಬಂಧಿಸಲಾಗಿದೆ ಎಂದು ಸಜ್ಜನರ್ ತಿಳಿಸಿದ್ದಾರೆ.

ಬಂಧಿತನಿಂದ ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲಿಸುತ್ತಿರುವ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್​ ಮತ್ತು ಇತರ ಅಧಿಕಾರಿಗಳು.

ಸೈಬರ್ ಕಳ್ಳನಿಂದ ಕಲಿತ

ಅಮೆರಿಕ ಮೂಲದ ಪ್ರಿನ್ಸ್ ಎಂಬಾತ ರಿಷಭ್ ಕಡೆಯಿಂದ ನೌಕರಿ ವೆಬ್‌ಸೈಟ್ ಅಭಿವೃದ್ಧಿ ಪಡಿಸಿಕೊಂಡಿದ್ದ. ಇದೇ ರೀತಿ ಹಲವರಿಗೆ ರಿಷಭ್ ಹೊಸ ವೆಬ್‌ಸೈಟ್ ಮಾಡಿಕೊಡುತ್ತಿದ್ದ. ಇದಾದ ಮೇಲೆ ಕೆಲ ತಿಂಗಳ ಮೇಲೆ ರಿಷಭ್, ತಾನು ಅಭಿವೃದ್ಧಿ ಪಡಿಸಿರುವ ವೆಬ್‌ಸೈಟ್‌ಗೆ ಜನರ ಅಭಿಪ್ರಾಯ ಹೇಗಿದೆ ಎಂದು ಸರ್ವೆ ವರದಿ ನೋಡುತ್ತಿದ್ದ. ಅದೇ ಸಮಯದಲ್ಲಿ ಅಮೆರಿಕ ಪ್ರಜೆಗೆ ಅಭಿವೃದ್ಧಿ ಪಡಿಸಿದ್ದ ನೌಕರಿ ವೆಬ್‌ಸೈಟ್‌ಗೆ ಜಾಬ್ ಚೀಟರ್ ಎಂದು ಸಾವಿರಾರು ಜನರು ಅಭಿಪ್ರಾಯ ತಿಳಿಸಿದ್ದರು. ಅದರ ಒಳಹೊಕ್ಕು ನೋಡಿದಾಗ ಪ್ರಿನ್ಸ್, ನೌಕರಿ ಕೊಡಿಸುವುದಾಗಿ ನೋಂದಣಿಗೆಂದು ಪ್ರತಿಯೊಬ್ಬರ ಬಳಿ 1 ಡಾಲರ್ ಜಮೆ ಮಾಡಿಕೊಳ್ಳುತ್ತಿದ್ದ. ಇದೇ ರೀತಿ ಸಾವಿರಾರು ಮಂದಿಯಿಂದ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದನ್ನು ಅರಿತ ರಿಷಭ್, ಕೊನೆಗೆ ತಾನೇ ನಕಲಿ ವೆಬ್‌ಸೈಟ್ ಸೃಷ್ಟಿಸಿ ಮೋಸಕ್ಕೆ ಇಳಿದಿದ್ದ.

ದೂರು ಕೊಟ್ಟು ಹಣ ಹಿಂಪಡೆಯಿರಿ

ಸೈಬರಾಬಾದ್‌ನಲ್ಲಿ ಬಂಧಿತ ರಿಷಭ್ ವಿರುದ್ಧ 9 ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ವಂಚನೆ ಮೊತ್ತ ಕಡಿಮೆ. ಆರೋಪಿಯಿಂದ 40 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಇದೇ ರೀತಿ ನೂರಾರು ಮಂದಿಗೆ ಮೋಸ ಮಾಡಿರುವುದು ಅನುಮಾನವಿದೆ. www.zopnow.in ಮತ್ತು www.modwayfurniture.in ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮಾಡಿ ವಂಚನೆಗೆ ಒಳಗಾದವರು ಸ್ಥಳೀಯ ಠಾಣೆಗೆ ದೂರು ನೀಡಿ ಅಥವಾ ಈಗಾಗಲೇ ದೂರು ನೀಡಿ ಪ್ರಕರಣ ದಾಖಲಾಗಿದ್ದರೆ ಮೋಸವಾದ ಹಣ ಹಿಂಪಡೆಯಬಹುದು ಎಂದು ಸೈಬರಾಬಾದ್ ಅಪರಾಧ ವಿಭಾಗದ ಡಿಸಿಪಿ ಎಸ್.ಎಂ. ವಿಜಯಕುಮಾರ್ ಸಲಹೆ ನೀಡಿದ್ದಾರೆ.

ಅನ್ಯರ ಖಾತೆಗೆ ಹಣ ಜಮೆ

ನಕಲಿ ಶಾಪಿಂಗ್ ವೆಬ್‌ಸೈಟ್ ಗ್ರಾಹಕರಿಂದ ಹಣ ವಸೂಲಿಗೆ ಅನ್ಯರ ಬ್ಯಾಂಕ್ ಖಾತೆಗಳನ್ನು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ವಿದೇಶದಲ್ಲಿ ನೌಕರಿ ಮತ್ತು ವೀಸಾ ಮಾಡಿಸುವ ನಕಲಿ ವೆಬ್‌ಸೈಟ್ ತೆರೆದು ಉದ್ಯೋಗಾಕಾಂಕ್ಷಿಗಳಿಗೆ ಬಲೆಬೀಸುತ್ತಿದ್ದ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಎಸ್‌ವಿಸಿ ಬ್ಯಾಂಕ್, ಬಂಧನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್​​ ಇಂಡಿಯಾದಲ್ಲಿ ಖಾತೆ ತೆರೆದು ಡೆಬಿಟ್ ಕಾರ್ಡ್‌ನ್ನು ತನಗೆ ಕಳುಹಿಸಿದರೆ ನೌಕರಿ ಮತ್ತು ವೀಸಾ ಕೊಡಿಸುವುದಾಗಿ ನಂಬಿಸಿದ್ದ. ಆನಂತರ ಇವರ ಬ್ಯಾಂಕ್ ಖಾತೆಗೆ ಶಾಪಿಂಗ್ ಗ್ರಾಹಕರಿಂದ ಹಣ ವರ್ಗಾವಣೆ ಮಾಡಿಸಿಕೊಂಡು ತಾನೇ ಡ್ರಾ ಮಾಡುತ್ತಿದ್ದ. ಇದು ಅಸಲಿ ಖಾತೆದಾರರ ಗಮನಕ್ಕೆ ಬರುತ್ತಿರಲಿಲ್ಲ.