ನ್ಯೂಸ್

ಐಫೋನ್ ಗಿಫ್ಟ್ ಆಮಿಷ: ಆನ್​ಲೈನ್ ಲಿಂಕ್ ಕಳುಹಿಸಿ ಇಬ್ಬರ ಬ್ಯಾಂಕ್ ಖಾತೆಗೆ ಕನ್ನ

ಬೆಂಗಳೂರು: ದೇವರ ವಿಗ್ರಹ ಖರೀದಿ ಹಾಗೂ ಐಫೋನ್ ಉಡುಗೊರೆ ಕಳುಹಿಸುವ ಸೋಗಿನಲ್ಲಿ ಇಬ್ಬರಿಗೆ ಗಾಳ ಬೀಸಿದ್ದ ಸೈಬರ್ ಕಳ್ಳರು, ಆನ್​ಲೈನ್ ಲಿಂಕ್ ಕಳುಹಿಸಿ ಅಮಾಯಕರ ಬ್ಯಾಂಕ್ ಖಾತೆಗಳಿಂದ 32 ಸಾವಿರ ರೂ. ದೋಚಿದ್ದಾರೆ.

ವಿಜಯನಗರದ ಸಂಜಯ್ ಜೋಷಿ ಮತ್ತು ಪಾದರಾಯನಪುರದ ರಾಮಪ್ರಸಾದ್ ವಂಚನೆಗೊಳಗಾದವರು. ಈ ಸಂಬಂಧ ಶ್ರೀಕಾಂತ್ ಸಿಂಗ್ ಸೇರಿ ಇಬ್ಬರ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೖೆಂ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

8 ಸಾವಿರ ರೂ. ಮೋಸ: ಸಂಜಯ್ ಎಂಬುವರಿಗೆ ಕರೆಮಾಡಿದ್ದ ಶ್ರೀಕಾಂತ್ ಸಿಂಗ್, ತಾನು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಇಂದಿರಾನಗರದಲ್ಲಿ ನೆಲೆಸಿದ್ದು, ತನ್ನ ಮೇಲಧಿಕಾರಿಗಳಿಗೆ ದೇವರ ವಿಗ್ರಹ ಬೇಕು ಎಂದಿದ್ದ. ಬಳಿಕ 40 ಸಾವಿರ ರೂ.ಗೆ ವಿಗ್ರಹ ಖರೀದಿಸಲು ಒಪ್ಪಿಗೆ ಸೂಚಿಸಿ, ಆನ್​ಲೈನ್ ಮೂಲಕ 10 ಸಾವಿರ ರೂ. ಮುಂಗಡ ಹಣ ವರ್ಗಾಯಿಸುವುದಾಗಿ ನಂಬಿಸಿದ್ದ. ಈ ವೇಳೆ ಸಂಜಯ್ ಜೋಷಿ ವ್ಯಾಲೆಟ್​ನಿಂದ ತನ್ನ ಖಾತೆಗೆ 5 ರೂ. ವರ್ಗಾಯಿಸಿಕೊಂಡು, ಅದಕ್ಕೆ ಪ್ರತಿಯಾಗಿ 10 ರೂ. ವರ್ಗಾಯಿಸಿದ್ದಾನೆ. ಈ ರೀತಿ ವ್ಯವಹರಿಸುವುದು ಭಾರತೀಯ ವಾಯುಸೇನೆ ಪದ್ಧತಿ ಎಂದು ನಂಬಿಸಿದ್ದ. ಇದಾದ ಕೆಲ ನಿಮಿಷಗಳ ಬಳಿಕ ಸಂಜಯ್ ಜೋಷಿ ಅವರ ಖಾತೆಯಿಂದ 8 ಸಾವಿರ ರೂ. ಕಡಿತವಾಗಿದೆ. ಆರೋಪಿ ಸಂಪರ್ಕಕ್ಕೆ ಸಿಗದೇ ಇದ್ದಾಗ ವಂಚನೆಯಾಗಿರುವುದು ಗೊತ್ತಾಗಿದೆ.

ಐಫೋನ್ ಗಿಫ್ಟ್ ಆಮಿಷ

ನಿಮ್ಮ ಫೋನ್ ನಂಬರ್​ಗೆ ಐಫೋನ್ ಉಡುಗೊರೆ ಬಂದಿದೆ ಎಂದು ರಾಮಪ್ರಸಾದ್ ಎಂಬುವರಿಗೆ ಕರೆ ಮಾಡಿ ಆಮಿಷವೊಡ್ಡಿದ್ದ ಅಪರಿಚಿತರು, ಪಡೆದುಕೊಳ್ಳುವಂತೆ ತಿಳಿಸಿದ್ದರು. ಆನ್​ಲೈನ್ ಲಿಂಕ್ ಕಳುಹಿಸುತ್ತೇವೆ, ಕ್ಲಿಕ್ ಮಾಡುವಂತೆ ಸೂಚಿಸಿದ್ದಾರೆ. ಅವರ ಮಾತನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದಾಗ ಬ್ಯಾಂಕ್ ಖಾತೆಯಿಂದ 25 ಸಾವಿರ ರೂ. ಬೇರೊಂದು ಖಾತೆಗೆ ವರ್ಗಾವಣೆಯಾಗಿದೆ.