ಕೊಟ್ಟಾಯಂ: ಸೈಬರ್ ದಾಳಿಯಿಂದ ಮನನೊಂದು ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಮೃತ ಯುವತಿಯ ಮಾಜಿ ಬಾಯ್ಫ್ರೆಂಡ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತ ಯುವತಿಯನ್ನು ಅಥಿರಾ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಬಾಯ್ಫ್ರೆಂಡ್ ಅರುಣ್ ವಿದ್ಯಾಧರಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಅಥಿರಾ ಕೊತ್ತನಲ್ಲೂರಿನ ನಿವಾಸಿ. ಸೋಮವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದರು.
ಅಥಿರಾ ಮಣಿಪುರದಲ್ಲಿರುವ ಕೇರಳ ಮೂಲದ ಐಎಎಸ್ ಅಧಿಕಾರಿ ಅವರ ಅತ್ತಿಗೆ. ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಅಥಿರಾ ಅವರ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದ.
ಇತ್ತೀಚೆಗಷ್ಟೇ ಆಥಿರಾ, ಅರುಣ್ ಜತೆಗಿನ ಸ್ನೇಹವನ್ನು ತ್ಯಜಿಸಿದ್ದರು. ಅಥಿರಾಗೆ ಮದುವೆ ಪ್ರಸ್ತಾಪಗಳು ಬರುತ್ತಿವೆ ಎಂಬುದನ್ನು ತಿಳಿದುಕೊಂಡ ಅರುಣ್, ಸಾಮಾಜಿಕ ಜಾಲತಾಣ ಮೂಲಕ ಅಥಿರಾಳನ್ನು ನಿರಂತರವಾಗಿ ನಿಂದಿಸಿದ್ದಾನೆ. ಅಲ್ಲದೆ, ಫೇಸ್ಬುಕ್ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್ ಮಾಡಿ ಮಾನಹಾನಿಕರವಾದ ಅಶ್ಲೀಲ ಬರಹಗಳನ್ನು ಬರೆದಿದ್ದ.
ಇದು ಅಥಿರಾಳ ಗಮನಕ್ಕೆ ಬಂದು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅರುಣ್ ವಿದ್ಯಾಧರನ್ ಸದ್ಯ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್)