ನವದೆಹಲಿ: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಘರ್ಷದಿಂದ ಕನ್ನಡಿಗರಲ್ಲಿ ಉಂಟಾಗಿರುವ ಅಸಮಾಧಾನ ಮತ್ತೆ ಕಾವೇರುವಂತಾಗಿದೆ. ಏಕೆಂದರೆ ಇನ್ನೂ 16 ದಿನಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಇಂದು ಇನ್ನೊಂದು ಆದೇಶ ಹೊರಬಿದ್ದಿದೆ.
ನವದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್ಸಿ) ಸಭೆ ಬಳಿಕ ಈ ಆದೇಶ ಹೊರಡಿಸಲಾಗಿದೆ. ಅ. 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಈ ಆದೇಶದಲ್ಲಿ ತಿಳಿಸಲಾಗಿದೆ.
ತಮಿಳುನಾಡಿಗೆ ಈಗಾಗಲೇ ಸಾಕಷ್ಟು ನೀರು ಬಿಟ್ಟಿರುವುದರಿಂದ ಕರ್ನಾಟಕದ ರೈತರು ಹೈರಾಣಾಗಿದ್ದು, ಕನ್ನಡಪರ ಹೋರಾಟಗಾರರು ಆಕ್ರೋಶಗೊಂಡಿದ್ದರು. ಅದಾಗ್ಯೂ ತಮಿಳುನಾಡಿಗೆ ನೀರು ಹರಿಯುವುದರ ಮುಂದುವರಿಕೆ ಆಗುತ್ತಿರುವುದು ಈ ವಿವಾದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದೆ.