Cruel Mother: ತನಗೆ ಜನಿಸಿದ 52 ದಿನಗಳ ಪುಟ್ಟ ಕಂದಮ್ಮನನ್ನು ತಾನೇ ಹತ್ಯೆಗೈದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪಾಪಿ ತಾಯಿಯ ಕೃತ್ಯ ಇದೀಗ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ವರದಿಯಾಗಿದೆ.
ಕೇವಲ 52 ದಿನಗಳ ಹಿಂದೆಯಷ್ಟೇ ಜನಿಸಿದ ಮಗುವನ್ನು ಗ್ರಾಮದ ಹೊರವಲಯದಲ್ಲಿರುವ ಕೃಷಿ ಬಾವಿಗೆ ಎಸೆದು, ತನಗೆ ಏನೂ ಗೊತ್ತೇ ಇಲ್ಲ ಎನ್ನುವಂತೆ ಪೊಲೀಸ್ ಠಾಣೆಯಲ್ಲಿ ಬಿಂಬಿಸಿದ ಮಹಿಳೆಯ ಅಸಲಿ ಮುಖವನ್ನು ಕಡೆಗೂ ಪೊಲೀಸರು ಕಳಚಿಟ್ಟಿದ್ದಾರೆ. ಮಗುವನ್ನು ಬಾವಿಗೆ ಎಸೆದ ಪಾಪಿ ಮಹಿಳೆ, ಠಾಣೆಗೆ ಬಂದು ತನ್ನ ಮಗು ಕಾಣೆಯಾಗಿದೆ ಎಂದು ದೂರು ಸಲ್ಲಿಸಿದ್ದಳು. ಮೊದಲಿಗೆ ಈ ಪ್ರಕರಣವನ್ನು ಮಿಸ್ಸಿಂಗ್ ಕಂಪ್ಲೆಂಟ್ ಎಂದು ಪರಿಗಣಿಸಿದ್ದ ಖಾಕಿ ಪಡೆ, ನಂತರ ಆಕೆಯ ನಡೆ-ನುಡಿಯಿಂದ ಇದನ್ನು ಕೊಲೆ ಎಂದು ಖಚಿತಪಡಿಸಿಕೊಂಡಿದ್ದಾರೆ.
ಮಗು ಎಲ್ಲಿ ಕಡೆಯದಾಗಿ ನಿನಗೆ ಕಾಣಿಸಿದ್ದು ಎಂದು ತನಿಖೆ ಪ್ರಾರಂಭಿಸಿದ ಪೊಲೀಸರು, ಮನೆಯ ಸುತ್ತಮುತ್ತಲಿನ ಸ್ಥಳಕ್ಕೆ ಧಾವಿಸಿ ಮಗುವಿನ ಹುಡುಕಾಟ ನಡೆಸಿದ್ದರು. ಆದಾಗ್ಯೂ, ಮಗು ಕುರಿತು ತಾಯಿ ನೀಡಿದ ಹೇಳಿಕೆಗಳು ನಾಪತ್ತೆ ಕೇಸ್ಗೆ ಹೊಂದದೆ ಇದ್ದದ್ದನ್ನು ಅರಿತ ಖಾಕಿ ಪಡೆ, ಆಕೆಯನ್ನೇ ವಿಚಾರಣೆಗೆ ಒಳಪಡಿಸಿ, ನಿಜ ಸಂಗತಿಯೇನು ಎಂಬುದನ್ನು ಬಾಯ್ಬಿಡಿಸಿದ್ದಾರೆ.
ಇದನ್ನೂ ಓದಿ: 7 ವರ್ಷದ ಮಗನನ್ನು 18 ಸಾವಿರ ರೂಪಾಯಿಗೆ ಮಾರಿದ ತಾಯಿ! ಸಹಾಯಕ್ಕಾಗಿ ಬೇಡಿಕೊಂಡ ತಂದೆ.. Mother sells 7year old son
ಸಿದ್ದಿಪೇಟೆ ಗ್ರಾಮೀಣ ಮಂಡಲದ ಪುಲ್ಲೂರಿನ ಶ್ರೀಮನ್ ಮತ್ತು ನಂಗುನೂರ್ ಮಂಡಲದ ಕವಿತಾ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶ್ರೀಮನ್ ಎರಡು ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಜೈಲುಪಾಲಾಗಿದ್ದ. ಗಂಡನ ನಡೆ ಮತ್ತು ಚಿಂತನೆಗಳಿಂದ ದೂರ ಉಳಿಯಲು ಬಯಸಿದ ಆರೋಪಿ ಕವಿತಾ, ಹಲವು ಬಾರಿ ಪತಿಯೊಂದಿಗೆ ಜಗಳವಾಡಿದ್ದಾಳೆ. ಪತಿಯಿಂದ ದೂರವಾಗಲು ಮಗು ಅಡ್ಡಿಯಾಗಿದೆ ಎಂಬುದನ್ನು ಅರಿತ ಆಕೆ, ಹಸುಗೂಸನ್ನು ಬಾವಿಗೆ ಎಸೆದು ಹತ್ಯೆಗೈದಿರುವುದು ಇದೀಗ ತನಿಖೆಯಲ್ಲಿ ಬಯಲಾಗಿದೆ,(ಏಜೆನ್ಸೀಸ್).