ಹುಬ್ಬಳ್ಳಿ: ಪ್ರಯಾಣದಲ್ಲಿರುವಾಗ ಆಪತ್ತು ಯಾವಾಗ ಯಾವ ರೀತಿಯಲ್ಲಿ ಎದುರಾಗುತ್ತದೆ ಎಂದು ಹೇಳುವುದು ಕಷ್ಟ. ಕೆಲವರು ಒಂದು ಸಣ್ಣ ತಪ್ಪಿನಿಂದ ದೊಡ್ಡ ಆಪತ್ತಿಗೆ ಒಳಗಾದರೆ, ಇನ್ನು ಕೆಲವರು ದೊಡ್ಡ ತೊಂದರೆಯಿಂದ ಸಣ್ಣದರಲ್ಲೇ ಪಾರಾಗಿಬಿಡುತ್ತಾರೆ.
ನಿನ್ನೆ ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು. ಇಂದು ಬೃಹತ್ ಕ್ರೇನ್ವೊಂದು ಪಲ್ಟಿಯಾದರೂ ತಂದೆ-ಮಗ ಇಬ್ಬರೂ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಹುಬ್ಬಳ್ಳಿಯ ಕೋರ್ಟ್ ಸರ್ಕಲ್ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಚೆನ್ನಮ್ಮ ವೃತ್ತದಿಂದ ರೈಲ್ವೆ ಮೈದಾನದವರಿಗೆ ಫ್ಲೈ ಓವರ್ ನಿರ್ಮಾಣವಾಗುತ್ತಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳಲ್ಲಿದೆ ಕಾಮಗಾರಿ ನಡೆಯುತ್ತಿದೆ. ವಾಹನಗಳ ಸಂಚಾರದ ಮಧ್ಯೆಯೇ ಬೃಹತ್ ಕ್ರೇನ್ ಬಳಸಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು, ಕ್ರೇನ್ ಏಕಾಏಕಿ ರಸ್ತೆ ಪಕ್ಕದ ವಿದ್ಯುತ್ ಕಂಬದ ಮೇಲೆ ಉರುಳಿದೆ. ಮಾತ್ರವಲ್ಲ ತಂದೆ-ಮಗ ಸಂಚರಿಸುತ್ತಿದ್ದ ಬೈಕ್ ಕೂಡ ಜಖಂ ಆಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.