ನ್ಯೂಸ್

ಒಂದು ಡೋಸ್​ ಕೋವಿಶೀಲ್ಡ್​, ಇನ್ನೊಂದು ಡೋಸ್​ ಕೋವಾಕ್ಸಿನ್ ! ಸರ್ಕಾರ ಹೇಳಿದ್ದೇನು ?

ನವದೆಹಲಿ : ಇತ್ತೀಚೆಗೆ ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 20 ಗ್ರಾಮಸ್ಥರಿಗೆ ಕರೊನಾ ಲಸಿಕೆ ನೀಡುವಾಗ ಎಡವಟ್ಟೊಂದು ನಡೆದಿದೆ. ಏಪ್ರಿಲ್​ನಲ್ಲಿ ಮೊದಲನೇ ಡೋಸ್​​ನಲ್ಲಿ​ ಕೋವಿಶೀಲ್ಡ್​ ತೆಗೆದುಕೊಂಡಿದ್ದವರಿಗೆ ಎರಡನೇ ಡೋಸ್​ ಆಗಿ ಕೋವಾಕ್ಸಿನ್​ಅನ್ನು ನೀಡಲಾಗಿದೆ. ಆದರೆ ಈ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಬಗ್ಗೆ ನ್ಯಾಷನಲ್ ಎಕ್ಸ್​ಪರ್ಟ್​ ಗ್ರೂಪ್​ ಆನ್​ ವ್ಯಾಕ್ಸಿನ್ ಅಡ್​ಮಿನಿಸ್ಟ್ರೇಷನ್ ಫಾರ್​ ಕೋವಿಡ್​19​ನ ಅಧ್ಯಕ್ಷ ಡಾ. ವಿ.ಕೆ.ಪೌಲ್​ ಅವರನ್ನು ಇಂದು ಸುದ್ದಿಗಾರರು ಪ್ರಶ್ನಿಸಿದಾಗ, ಯಾವುದೇ ಮಹತ್ವದ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆಗಳಿಲ್ಲ. ಆದಾಗ್ಯೂ ಹೆಚ್ಚಿನ ಪರಿಶೀಲನೆ ಮಾಡುವ ಅಗತ್ಯವಿದೆ ಎಂದಿದ್ದಾರೆ. "ಈ ಬಗ್ಗೆ ಪರಿಶೀಲಿಸಬೇಕು. ಹೆಚ್ಚಿನ ವೈಜ್ಞಾನಿಕ ತಿಳುವಳಿಕೆಗಾಗಿ ನಾವು ಕಾಯಬೇಕಾಗಿದೆ. ಆದರೆ ಎರಡು ಡೋಸ್​ಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ನೀಡಲಾಗಿದ್ದರೂ ಸಹ, ಕಳವಳ ಪಡಬೇಕಾಗಿಲ್ಲ" ಎಂದು ಹೇಳಿದ್ದಾರೆಂದು ಎನ್​ಡಿಟಿವಿ ವರದಿ ಮಾಡಿದೆ.

ಜಾಗತಿಕವಾಗಿ, ವಿವಿಧ ಲಸಿಕೆಗಳನ್ನು ಮಿಶ್ರಣ ಮಾಡಿ ನೀಡಿದರೆ ಅದರ ಪರಿಣಾಮಕಾರಿತ್ವ ಹೆಚ್ಚಬಹುದೇ ಎಂಬ ಸಂಶೋಧನೆಯನ್ನು ಕೆಲವು ವಿಜ್ಞಾನಿಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಒಂದು ಆಕಸ್ಮಿಕವಾಗಿದೆ. ಈ ರೀತಿ ಬೇರೆ ಬೇರೆ ಲಸಿಕೆ ಡೋಸ್​ ಪಡೆದ ಜನರು ಆತಂಕಕ್ಕೀಡಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಿದ್ಧಾರ್ಥನಗರ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಅವರು, "ಇದು ಖಂಡಿತವಾಗಿಯೂ ತಪ್ಪಾಗಿ ನಡೆದಿದೆ. ಲಸಿಕೆಗಳನ್ನು ಮಿಶ್ರಣ ಮಾಡಿ ನೀಡಲು ಯಾವುದೇ ಸರ್ಕಾರಿ ಸೂಚನೆಗಳಿಲ್ಲ. ತಪ್ಪಿತಸ್ಥರಿಂದ ನಾನು ಸ್ಪಷ್ಟನೆ ಕೇಳಿದ್ದೇನೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ. (ಏಜೆನ್ಸೀಸ್)