ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 4,991 ಹೊಸ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಕರ್ನಾಟಕ ಸಕ್ರಿಯ ಪ್ರಕರಣಗಳಲ್ಲಿ ಮತ್ತೆ 2ನೇ ಸ್ಥಾನಕ್ಕೇರಿದೆ. ದಿನದ ಸೋಂಕು ಪ್ರಮಾಣದ ದರ ಶೇ. 4.19ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರ 3.67 ಲಕ್ಷದೊಂದಿಗೆ 1ನೇ ಸ್ಥಾನದಲ್ಲಿದ್ದು, ಕರ್ನಾಟಕ 34,219 2ನೇ ಸ್ಥಾನದಲ್ಲಿದೆ. ಛತ್ತೀಸ್‌ಘಡ 28,987 3ನೇ ಸ್ಥಾನ, ಕೇರಳ 26,211 4ನೇ ಸ್ಥಾನ ಹಾಗೂ ಪಂಜಾಬ್ 24,644 5ನೇ ಸ್ಥಾನದಲ್ಲಿದೆ.
ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಐವರು ಹಾಗೂ ಕಲಬುರಗಿಯಲ್ಲಿ ಒಬ್ಬರು ಸೇರಿ 6 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 12,591 ತಲುಪಿದೆ. ಈವರೆಗಿನ ಸೋಂಕಿತರ ಸಂಖ್ಯೆ 10.06 ಲಕ್ಷ ಮೀರಿದೆ. 1,631 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 9.59 ಲಕ್ಷ ದಾಟಿದೆ.
34,219 ಸಕ್ರಿಯ ಪ್ರಕರಣಗಳಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರೆ, ಹಲವರು ಕೋವಿಡ್ ಕೇರ್ ಸೆಂಟರ್ ಹಾಗೂ ಮನೆಯಲ್ಲಿ ನಿಗಾದಲ್ಲಿದ್ದಾರೆ. ಉಳಿದಂತೆ 269 ಮಂದಿ ಗಂಭೀರ ಸಮಸ್ಯೆಯಿಂದಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕು ಹೆಚ್ಚಿದ ಜಿಲ್ಲೆಗಳು; ಶುಕ್ರವಾರ ಬೆಂಗಳೂರು ನಗರ ಜಿಲ್ಲೆ 3,509, ಮೈಸೂರು 174, ತುಮಕೂರು 142, ಬೀದರ್ 126, ಕಲಬುರಗಿ ಮತ್ತು ದಕ್ಷಿಣ ಕನ್ನಡ ತಲಾ 105, ಹಾಸನ 102 ಸೋಂಕು ಪ್ರಕರಣಗಳ ವರದಿಯಾಗಿದೆ.
1.18 ಲಕ್ಷ ಪರೀಕ್ಷೆ: ರಾಜ್ಯದಲ್ಲಿ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಶುಕ್ರವಾರ ಒಂದೇ ದಿನ 6,415 ರಾಪಿಡ್ ಆಂಟಿಜನ್ ಟೆಸ್ಟ್ ಹಾಗೂ 1,12,518 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 1,18,933 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೂ 2.16 ಕೋಟಿ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ.