

ಮುಂಬೈ: ಕರೊನಾವೈರಸ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದೇ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜನರಿಗೆ ಲಾಕ್ಡೌನ್ ಭೂತವನ್ನು ತೋರಿಸಿ ಹೆದರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ನಾರಾಯಣ ರಾಣೆ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಮಹಾರಾಷ್ಟ್ರ ಜನಕ್ಕೆ ಲಾಕ್ಡೌನ್ ಅವಶ್ಯಕತೆ ಇಲ್ಲ. ಮತ್ತೊಂದು ಲಾಕ್ಡೌನ್ ಸ್ವೀಕಾರಾರ್ಹವಲ್ಲ. ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು, ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವ ಕಡೆಗೆ ಗಮನ ಕೊಡಬೇಕು ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನಿಂದ 54 ಸಾವಿರ ಜನ ಮೃತಪಟ್ಟಿದ್ದಾರೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಬೇಕಾಗಿಲ್ಲ. ಮುಖ್ಯಮಂತ್ರಿಯವರಿಗೆ ತಮ್ಮ ಕುಟುಂಬದವರಷ್ಟೇ ಮುಖ್ಯವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಠಾಕ್ರೆ ಸರ್ಕಾರ ಜನರೊಂದಿಗೆ ಸರಿಯಾಗಿ ನಡೆದುಕೊಳ್ಳಬೇಕು. ಕಳೆದ ಒಂದು ವರ್ಷದಿಂದ ಆರೋಗ್ಯದ ಮೂಲಭೂತ ಸೌಕರ್ಯಗಳ ಹೆಚ್ಚಿಸುವ ಕಡೆಗೆ ಗಮನ ನೀಡಿಲ್ಲ. ಬದಲಿಗೆ ಈಗ ಜನರಿಗೆ ಮತ್ತೊಂದು ಲಾಕ್ಡೌನ್ ಎಂದು ಹೆದರಿಸುತ್ತಿದ್ದಾರೆ ಎಂದು ನಾರಾಯಣ ರಾಣೆ ಹೇಳಿದ್ದಾರೆ. ಅಲ್ಲದೇ ರಾಣೆ ಅವರು, ಮಹಾರಾಷ್ಟ್ರದಲ್ಲಿ ಅಲ್ಲಲ್ಲಿ ಹೇರಲಾಗುತ್ತಿರುವ ನೈಟಗ ಕರ್ಫ್ಯೂವನ್ನೂ ವಿರೋಧಿಸಿದ್ದಾರೆ.