ನ್ಯೂಸ್

ಕರೊನಾ ಸೋಂಕಿನಿಂದ ಸತ್ತವರ ಶವಸಂಸ್ಕಾರಕ್ಕೆ ಇಲ್ಲ ಸ್ಥಳ, ಅದಕ್ಕೆ ಏನು ಮಾಡುತ್ತಿದ್ದಾರೆ ಗೊತ್ತಾ?

ನವದೆಹಲಿ: ಕರೊನಾ ವೈರಾಣು ಸೋಂಕು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಬಲಿಪಡೆಯುತ್ತಲೇ ಇದೆ. ಇದರಿಂದಾಗಿ ಶವಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆ ಉಂಟಾಗಿ ಕುಟುಂಬಸ್ಥರು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಥಳೀಯ ಸರ್ಕಾರಗಳು ಶೀತಲೀಕೃತ ಟ್ರಕ್​ಗಳನ್ನು ವ್ಯವಸ್ಥೆ ಮಾಡುತ್ತಿದ್ದು, ಅದರಲ್ಲಿ ಶವಗಳನ್ನು ಸಂರಕ್ಷಿಸಿಡಲಾಗುತ್ತಿದೆ.

ಇದು ಅಮೆರಿಕದಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕೂ ಮುನ್ನ ಕೋವಿಡ್​-19 ಪಿಡುಗು ತಾರಕದಲ್ಲಿದ್ದಾಗ ನ್ಯೂಯಾರ್ಕ್​ನಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿತ್ತು. ಆಗಲೂ ಕೂಡ ಇದೇ ರೀತಿ ಶೀತಲೀಕೃತ ಟ್ರಕ್​ಗಳಲ್ಲಿ ಶವಗಳನ್ನು ಸಂರಕ್ಷಿಸಿ ಇಡಲಾಗುತ್ತಿತ್ತು. ಇದೀಗ ಈ ಪ್ರವೃತ್ತಿ ಅಮೆರಿಕದ ಟೆಕ್ಸಾಸ್​ ಮತ್ತು ಆರಿಜೋನಾಗಳಿಗೆ ವಿಸ್ತರಿಸಿದೆ.

ಟೆಕ್ಸಾಸ್​ನಲ್ಲಿ ಇದುವರೆಗೂ 3,700 ಜನರು ಮೃತಪಟ್ಟಿದ್ದಾರೆ. ಅಲ್ಲಿ ಈಗಲೂ ಪ್ರತಿದಿನ ಅಂದಾಜು 129 ಜನರ ಕರೊನಾಕ್ಕೆ ಬಲಿಯಾಗುತ್ತಿದ್ದಾರೆ. ಇವರೆಲ್ಲರ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಸ್ಯಾನ್​ ಆಂಟೋನಿಯೋ ಮತ್ತು ಕಾರ್ಪಸ್​ ಕ್ರಿಸ್ಟಿ ಎಂಬ ಊರುಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ ಆ ಊರುಗಳಲ್ಲಿ ಸ್ಥಳೀಯ ಆಡಳಿತಗಳು ಶವಗಳನ್ನು ಸಂರಕ್ಷಿಸಿಡಲು ಶೀತಲೀಕೃತ ಟ್ರಕ್​ಗಳು ಮತ್ತು ಟ್ರೇಲರ್​ಗಳನ್ನು ವ್ಯವಸ್ಥೆ ಮಾಡುತ್ತಿವೆ.

ಇಷ್ಟೊಂದು ಶವಗಳ ಸಂಸ್ಕಾರಕ್ಕೆ ಸ್ಥಳಾವಕಾಶವೇ ಇಲ್ಲವಾಗಿದೆ. ಇದು ಅಚ್ಚರಿಯೆನಿಸಿದರೂ ಸತ್ಯ. ಹಾಗಾಗಿ ನಾವು ಆಯಕಟ್ಟಿನ ಸ್ಥಳಗಳಲ್ಲಿ ಶೀತಲೀಕೃತ ಟ್ರಕ್​ ಮತ್ತು ಟ್ರೇಲರ್​ಗಳನ್ನು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸ್ಯಾನ್​ ಆಂಟಾನಿಯೋದ ಮೇಯರ್​ ರಾನ್​ ನಿರೆಂಬರ್ಗ್​ ತಿಳಿಸಿದ್ದಾರೆ.

ಆರಿಜೋನಾ ರಾಜ್ಯದಲ್ಲಿ ಕೂಡ ಇದುವರೆಗೆ 2,500ಕ್ಕೂ ಹೆಚ್ಚು ಜನರ ಕೋವಿಡ್​ಗೆ ಬಲಿಯಾಗಿದ್ದಾರೆ. ಶವಗಳನ್ನು ಇರಿಸಲು ಆಸ್ಪತ್ರೆಯ ಶವಗಾರಗಳಲ್ಲಿ ಸ್ಥಳದ ಕೊರತೆ ಉಂಟಾಗಿದೆ. ಹಾಗಾಗಿ ಮಾರಿಕೋಪಾ ಕೌಂಟಿ ಮತ್ತು ಫೀನಿಕ್ಸ್​ ನಗರಗಳಲ್ಲಿ ತಲಾ 294 ಶವಗಳನ್ನು ಇರಿಸಲು ಸಮರ್ಥವಾದ 14 ಶೀತಲೀಕೃತ ಟ್ರಕ್​ಗಳನ್ನು ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.