ನ್ಯೂಸ್

ಕೇರಳ: ಮಹಿಳೆಯಲ್ಲಿ ಪತ್ತೆಯಾಯ್ತು ಕೋವಿಡ್ 19 ಸಬ್ ಸ್ಟ್ರೈನ್ JN.1!

ಹೊಸದಿಲ್ಲಿ: ಡಿಸೆಂಬರ್ 8 ರಂದು ಕೇರಳದಲ್ಲಿ ಕೋವಿಡ್ 19 ಉಪ-ವೇರಿಯೆಂಟ್ JN.1 ಪ್ರಕರಣ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ (ಡಿ.16) ಮಾಹಿತಿ ನೀಡಿದ್ದು, 79 ವರ್ಷದ ಮಹಿಳೆಯ ಮಾದರಿಯು ನವೆಂಬರ್ 18 ರಂದು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀಡಿತು ಎಂದು ವರದಿ ಉಲ್ಲೇಖಿಸಿದೆ.

ಮಹಿಳೆ ಶೀತ ಸಂಬಂಧಿ ಖಾಯಿಲೆಗಳು (ಐಎಲ್‌ಐ) ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು, ಬಳಿಕ ಚಿಕಿತ್ಸೆ ಪಡೆದು ಕೋವಿಡ್​ ರೋಗದಿಂದ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರಸ್ತುತ ಭಾರತದಲ್ಲಿನ ಕೋವಿಡ್ 19 ಪ್ರಕರಣಗಳಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಸೌಮ್ಯವಾಗಿರುತ್ತವೆ ಮತ್ತು ಈ ರೋಗಕ್ಕೆ ಸಂಬಂಧಿಸಿದಂತೆ ರೋಗಿಗಳು ಮನೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಸಿಂಗಾಪುರದಲ್ಲಿ ಭಾರತೀಯ ಪ್ರಯಾಣಿಕರೊಬ್ಬರಲ್ಲಿ ಜೆಎನ್.1 ಉಪ ವೇರಿಯೆಂಟ್​ ಪತ್ತೆಯಾಗಿತ್ತು. ಈ ವ್ಯಕ್ತಿ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮೂಲದವರಾಗಿದ್ದು, ಅಕ್ಟೋಬರ್ 25 ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು. ಇದಾದ ಬಳಿಕ ತಿರುಚಿರಾಪಳ್ಳಿ ಜಿಲ್ಲೆ ಅಥವಾ ತಮಿಳುನಾಡಿನ ಇತರ ಸ್ಥಳಗಳಲ್ಲಿ ಸ್ಟ್ರೈನ್ ಪತ್ತೆಯಾದ ನಂತರ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).