ನ್ಯೂಸ್

ಹೊಸ ಅವತಾರವೆತ್ತುವ ಕರೋನಾ ವೈರಸ್​ ವಿರುದ್ಧ ಹೋರಾಡಲು ಮುಂಜಾಗ್ರತೆ ಮದ್ದಲ್ಲವೇ?

ಬೆಂಗಳೂರು: ಗೋಡೆಯ ಮೇಲೆ ಕ್ಯಾಲೆಂಡರ್‌ಗಳು ಬದಲಾಗುತ್ತಿವೆ ಆದರೆ ಕರೋನಾ ಋದ್ರನರ್ತನಕ್ಕೆ ಮಾತ್ರ ತೆರೆ ಬೀಳುತ್ತಿಲ್ಲ. ಅದು ಹೊಸ ಅವತಾರಗಳನ್ನೆತ್ತಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. 2019ಡಿಸೆಂಬರ್​ನಲ್ಲಿ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೋವಿಡ್​-19 ವೈರಸ್​ ಹೆಸರಿನ ಹೆಮ್ಮಾರಿ ಜನರನ್ನು ಇನ್ನೂ ಭೀತಿಯೆಡೆಗೆ ದೂಡುತ್ತಲೇ ಇದೆ. ಇದಕ್ಕೆ ಇತ್ತೀಚೆಗೆ ಕಾಣಿಸಿಕೊಂಡಿರುವ ರೂಪಾಂತರಿ ಜೆಎನ್-1 ವೈರಸ್‌ ಸಹ ಹೊರತಾಗಿಲ್ಲ.

ಚೀನಾ ವುಹಾನ್‌ನಲ್ಲಿ ವೈರಸ್ ಸಂಶೋಧನಾ ಕೇಂದ್ರವಿದ್ದು. ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿದೆ ಎಂಬ ಆರೋಪ ಕರೋನಾ ಆರಂಭದಲ್ಲೇ ಕೇಳಿಬಂದಿತ್ತು. ಕೋವಿಡ್-19 'ಕೊರೊನಾ ವೈರಸ್ ಡಿಸೀಸ್ 2019' ನ ಸಂಕ್ಷಿಪ್ತ ರೂಪವಾಗಿದೆ. ಇದಕ್ಕೆ ಕಾರಣ ಸಾರ್ಸ್ ಕೋವ್-2 ವೈರಸ್. ಮಾರ್ಚ್​ 11ರಂದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.

ಅಲ್ಲಿಂದ ಇಲ್ಲಿ ತನಕ ಸುಮಾರು 4ವರ್ಷ ವಿಶ್ವದೆಲ್ಲೆಡೆ ಕರೋನಾ ಸಾಕಷ್ಟು ಅನಾಹುತಗಳನ್ನು ಮಾಡಿದೆ. ಹಲವು ರಾಷ್ಟ್ರಗಳಲ್ಲಿ ಆರ್ಥಿಕತೆ ಬುಡಮೇಲಾಗಿದೆ. 2024ರ ಹೊಸ್ತಿಲಲ್ಲಿರುವ ಇಡೀ ಜನರ ನೆತ್ತಿಯ ಮೇಲೆ ಮತ್ತೊಮ್ಮೆ ಕರೋನಾ ಗುಮ್ಮ ನೇತಾಡುತ್ತಿದೆ.

ಡೆಲ್ಟಾ, ಓಮಿಕ್ರಾನ್.. ಮುಂತಾದ ರೂಪಾಂತರಗಳ ಹೆಸರುಗಳು ಬದಲಾದವು. ಆಸ್ಪತ್ರೆಗಳು ರೋಗಿಗಳಿಂದ ತುಂಬಿತುಳುಕಿದವು. ಆಸೆಬುರುಕ ವೈದ್ಯರು ಕರೋನಾ(ಜ್ವರ, ನೆಗಡಿ, ಕೆಮ್ಮು, ಶೀತ) ಮುಂದಿಟ್ಟು ಕೋಟಿ ಕೋಟಿ ಲೂಟಿ ಮಾಡಿದರು. ಇದರ ಅಂತ್ಯ ಯಾವಾಗ ಆಗುತ್ತದೆಯೋ ಗೊತ್ತಿಲ್ಲ. ಆದರೆ ಇದೊಂದು ಹಾರರ್ ಸರಣಿಯಂತೆ ಸಾಗುತ್ತಿದೆ. ಮಧ್ಯದಲ್ಲಿ, ಕರೆಂಟ್ ಕಡಿತಗೊಂಡಿದೆ. ಸ್ವಲ್ಪ ಹೊತ್ತು ವಿರಾಮ.

ಕರೋನಾ ಮತ್ತೆ ಮತ್ತೆ ಬಣ್ಣ ಬದಲಾಯಿಸುತ್ತಾ ನಮ್ಮ ಮುಂದೆ ಬರುತ್ತಿದೆ. ಜೆಎನ್​-1 ಈಗ ಚಾಲನೆಯಲ್ಲಿದೆ. ನೂರು ವರ್ಷಗಳ ಹಿಂದೆ ಅಂದರೆ 1918-1920 ರ ನಡುವೆ, 'ಸ್ಪ್ಯಾನಿಷ್ ಫ್ಲೂ' ಎಂಬ ಸಾಂಕ್ರಾಮಿಕ ರೋಗವು ಜಗತ್ತನ್ನು ಬೆಚ್ಚಿಬೀಳಿಸಿತು. ಆಗ ಈಗಿನಷ್ಟು ವೈದ್ಯಕೀಯ ಆವಿಷ್ಕಾರಗಳು ಮುಂದುವರಿದಿರಲಿಲ್ಲ. ಆಗ 1.7 ಕೋಟಿಯಿಂದ 10 ಕೋಟಿ ಜನರು ಇದಕ್ಕೆ ಬಲಿಯಾದರು. ಇನ್ನು ಪ್ಲೇಗ್​, ಕಾಲರಾ. ಮಲೇರಿಯಾಗೆ ಬಲಿಯಾದವರು ಅದೆಷ್ಟೇ ಮಂದಿ.

ಅದರ ನಂತರ ವೈರಸ್ ತಣ್ಣಗಾಗುವುದರೊಂದಿಗೆ ಕಥೆ ಕೊನೆಗೊಂಡಿತು. ಆದರೆ ಕರೋನಾ ಅದಕ್ಕಿಂತ ತೀವ್ರವಾಗಿ ಸ್ಫೋಟಿಸಿತು. ಇದು ಭೂಮಿಯ ಬಹುತೇಕ ಎಲ್ಲ ದೇಶಗಳಿಗೆ ಹರಡಿತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದುವರೆಗೆ 77 ಕೋಟಿ ಜನ ಕರೋನಾದಿಂದ ಪ್ರಭಾವಿತರಾಗಿದ್ದಾರೆ, ಅದರಲ್ಲಿ ಸುಮಾರು 70 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಮತ್ತು ಹಂದಿಜ್ವರದಂತಹ ವೈರಸ್‌ಗಳು ಕರೋನಾ ಅಕ್ಕತಂಗಿಯರೇ.

ಇತ್ತೀಚೆಗೆ ದೇಶದ ಹಲವು ರಾಜ್ಯಗಳಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಅದಯ 4 ಸಾವಿರ ದಾಟಿದೆ. ಸಾವಿನ ಸಂಖ್ಯೆ ಕಡಿಮೆಯಾದರೂ ಆತಂಕಕಾರಿಯಾಗಿದೆ. ಕರೋನಾ ಲಸಿಕೆ ಸಂಶೋಧನೆ ಮತ್ತು ತಯಾರಿಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ನಮ್ಮ ದೇಶದಲ್ಲೂ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಇವುಗಳಲ್ಲಿ ಹೆಚ್ಚಿನವು ಓಮಿಕ್ರಾನ್ ಪ್ರಭೇದಗಳಾಗಿವೆ. ಆದರೆ ಪ್ರಸ್ತುತ ಹರಡುತ್ತಿರುವ ಜೆಎನ್-1 ವೈರಸ್‌ಗೆ ಹೊಸ ಲಸಿಕೆ ಅಗತ್ಯವಿಲ್ಲ, ಇದು ಮಾರಕವಲ್ಲ ಮತ್ತು ಇದುವರೆಗೆ ಲಸಿಕೆ ತೆಗೆದುಕೊಂಡವರು ಮತ್ತೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಆದರೆ ಪರಿಸ್ಥಿತಿ ಕೈಮೀರಿಹೋದಅಗ ಯಾರೂ ಸಹಾಯ ಮಾಡುವುದಿಲ್ಲ. ಕರೋನಾ ಆರಂಭದಲ್ಲಿ ಆದ ಅನಾಹುತಗಳನ್ನು ಮರೆಯಬಾರದು.

ಯಾವುದು ಏನೇ ಇರಲಿ ಕಾಲಕಾಲಕ್ಕೆ ಹೊಸ ವೈರಸ್‌ಗಳು ಹೊರಹೊಮ್ಮುತ್ತವೆ. ಹೊಸ ಅವತಾರವೆತ್ತಿ ಬಂದ ಪ್ರಾರಂಭದಲ್ಲಿ ಮರಣಮೃದಂಗ ಭಾರಿಸುವುದು ಇದ್ದೇ ಇರುತ್ತದೆ. ಆದರೆ ಯಾವುದಕ್ಕೂ ನಿರ್ಲಕ್ಷ್ಯವಹಿಸದೆ, ವೈರಸ್​ ಅನ್ನು ಒಡೆದೋಡಿಸುವ ಶಕ್ತಿ ಪಡೆದುಕೊಂಡು, ಮುಂಜಾಗ್ರತೆಯಲ್ಲಿ ಬದುಕುವುದು ಅಗತ್ಯವಲ್ಲವೇ?