ಪಟನಾ: ಬಿಹಾರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಸುಮಾರು 34 ವರ್ಷಗಳ ಹಿಂದೆ 20 ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆದೇಶ ಹೊರಡಿಸಿರುವ ನ್ಯಾಯಾಲಯ ಕಾನ್ಸ್ಟೇಬಲ್ನನ್ನು ಬಂಧಿಸಿ ಕರೆತರಲು ಹೇಳಿದೆ.
1990 ಮೇ 6ರಂದು ಬರಹಿಯಾದಲ್ಲಿ ಕಾನ್ಸ್ಟೆಬಲ್ ಆಗಿದ್ದ ಸುರೇಶ್ ಪ್ರಸಾದ್ ಸಿಂಗ್, ಸಹರ್ಸಾ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸಿಂಗ್, ಮಹೇಶಖುಂಟ್ ಮೂಲದ ಸೀತಾ ದೇವಿಯನ್ನು ತಡೆದಿದ್ದರು. ಆಕೆ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ತರಕಾರಿ ಮೂಟೆಯನ್ನು ಹೊತ್ತೊಯುತ್ತಿದ್ದರು. ಹತ್ತಿರಬಂದ ದೇವಿ ಬಳಿ ಸಿಂಗ್ ಏನು ಗುಸುಗುಟ್ಟಿದರು. ಬಳಿಕ ಆಕೆ ತನ್ನ ಸೀರೆಯಲ್ಲಿ ಕಟ್ಟಿದ ಹಣವನ್ನು ಬಿಚ್ಚಿ ಸಿಂಗ್ಗೆ ಕೊಟ್ಟಿದ್ದರು.
ಈ ವೇಳೆ ಕಾನ್ಸ್ಟೆಬಲ್ ಸಿಂಗ್, ದೇವಿಯಿಂದ 20 ರೂಪಾಯಿ ಲಂಚ ಪಡೆದಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಯೇ ಬಹಳ ಹತ್ತಿರದಿಂದ ಎಲ್ಲವನ್ನು ಗಮನಿಸುತ್ತಿದ್ದ ರೈಲು ನಿಲ್ದಾಣದ ಉಸ್ತುವಾರಿ, ಪೇದೆ ಸಿಂಗ್ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು. ಅಲ್ಲದೆ, ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿತ್ತು. ಈ ಘಟನೆ ನಡೆದ 34 ವರ್ಷಗಳ ನಂತರ, ವಿಶೇಷ ವಿಜಿಲೆನ್ಸ್ ನ್ಯಾಯಾಧೀಶ ಸುದೇಶ್ ಶ್ರೀವಾಸ್ತವ ಅವರು ಈಗ ನಿವೃತ್ತಿಯಾಗಿರುವ ಪೇದೆ ಸಿಂಗ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಗುರುವಾರ (ಸೆ.05) ನಿರ್ದೇಶಿಸಿದ್ದಾರೆ.
ಈ ಲಂಚ ಪ್ರಕರಣ ಮರುಜೀವ ಪಡೆದುಕೊಳ್ಳಲು ಸುಮಾರು ಮೂರು ದಶಕಗಳನ್ನು ತೆಗೆದುಕೊಂಡಿದ್ದು, ನಮ್ಮ ದೇಶದ ಕಾನೂನು ಪ್ರಕ್ರಿಯೆಗಳಿಗೆ ಹಿಡಿದ ಕನ್ನಡಿಯಾಗಿದೆ. ಆರಂಭದಲ್ಲಿ ಜಾಮೀನು ಪಡೆದ ಸಿಂಗ್, ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದರು. 1999ರಲ್ಲಿ ಜಾಮೀನು ಬಾಂಡ್ ರದ್ದುಗೊಂಡು, ಬಂಧನ ವಾರೆಂಟ್ ಹೊರಡಿಸಿದಾಗಿನಿಂದ ಅವರು ತಲೆಮರೆಸಿಕೊಂಡಿದ್ದಾರೆ. ಆಸ್ತಿ ಜಪ್ತಿ ಆದೇಶ ಹೊರಡಿಸಿದ ನಂತರವೂ ಸಿಂಗ್ ಅವರನ್ನು ಪತ್ತೆ ಮಾಡುವ ಪ್ರಯತ್ನಗಳು ವ್ಯರ್ಥವಾಯಿತು.
ಇನ್ನು ಸಿಂಗ್ ಅವರ ಸೇವಾ ದಾಖಲೆಗಳ ತನಿಖೆಯಲ್ಲಿ ಅವರು ಮಹೇಶ್‌ಖುಂಟ್‌ನಲ್ಲಿ ನೆಲೆಸಿರುವುದಾಗಿ ಸುಳ್ಳು ವಿಳಾಸವನ್ನು ಒದಗಿಸಿರುವುದು ಬಹಿರಂಗವಾಗಿದೆ. ಈ ಒಂದು ಅಂಶ ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಸಿಂಗ್ ಅವರ ವಾಸ್ತವ ನಿವಾಸವು ಲಖಿಸರಾಯ್ ಜಿಲ್ಲೆಯ ಬರಹಿಯಾದ ಬಿಜೋಯ್ ಗ್ರಾಮ ಎಂಬುದು ತಿಳಿದುಬಂದಿದೆ. ಇದೀಗ ವಿಶೇಷ ವಿಜಿಲೆನ್ಸ್ ನ್ಯಾಯಾಧೀಶ ಸುದೇಶ್ ಶ್ರೀವಾಸ್ತವ ಅವರು ಹೊಸ ನಿರ್ದೇಶನ ನೀಡಿದ್ದು, ಸಿಂಗ್ ಬಂಧನವನ್ನು ಖಚಿತಪಡಿಸಿಕೊಳ್ಳಲು ಬಿಹಾರ ಪೊಲೀಸ್ ಡಿಜಿಪಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)