ಚಂಡಿಗಢ ಪ್ರೀತಿಸಿ, ಮನೆಯವರ ಒಪ್ಪಿಗೆಯಿಲ್ಲ ಎಂದು ಓಡಿ ಹೋಗಿ ಮದುವೆಯಾದ ಎರಡು ಜೋಡಿಗಳಿಗಳು ರಕ್ಷಣೆ ಕೊಡಿ ಎಂದು ಹೈಕೋರ್ಟ್ಗೆ ಹೋದರೆ, ಅವರಿಗೆ ಭರ್ಜರಿ ಶಾಕ್ ಎದುರಾಗಿದೆ. ನಿರೀಕ್ಷೆಯನ್ನೇ ಮಾಡಿರದಂಥ ತೀರ್ಪನ್ನು ನ್ಯಾಯಾಧೀಶರು ನೀಡಿದ್ದಾರೆ.
ಇದು ಪ್ರತ್ಯೇಕ ಪ್ರಕರಣವಾದರೂ ಒಂದೇ ಸ್ವರೂಪದ್ದು. ಎರಡೂ ಜೋಡಿಗಳು ಪ್ರೀತಿಸಿ, ಓಡಿಹೋಗಿ ಮದುವೆಯಾದವರು. ಅವರ ಮದುವೆಗೆ ಪಾಲಕರು, ಸಂಬಂಧಿಕರ ವಿರೋಧವಿತ್ತು. ಏನೇನೆಲ್ಲ ಗಲಾಟೆಯಾಗಿದೆಯೋ ಏನೋ, ಕದ್ದು ಮದುವೆಯಾಗಿ ಸೀದಾ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಹೋದರು.
ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ರಕ್ಷಣೆ ಕೊಡಿ ಎಂದು ಮನವಿ ಮಾಡಿದರು. ಮದುವೆಯಾದ ಫೋಟೋಗಳನ್ನು, ದಾಖಲೆಗಳನ್ನೆಲ್ಲ ಕೋರ್ಟ್ಗೆ ಒಪ್ಪಿಸಿದರು. ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ್ದು ನ್ಯಾಯಾಧೀಶ ಹರಿ ಪಾಲ್ ವರ್ಮಾ.
ಇದನ್ನೂ ಓದಿ: ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ
ಮೊದಲ ಜೋಡಿಯ ವಿಚಾರಣೆ ಕೈಗೆತ್ತಿಕೊಂಡ ಅವರು, ಮದುವೆಯ ಫೋಟೋಗಳನ್ನು ನೋಡಿದರು. ದಾಖಲೆಗಳನ್ನೂ ಸೂಕ್ಷ್ಮವಾಗಿ ಗಮನಿಸಿದರು. ಹಾಗೇ, ಅವರಿಬ್ಬರಿಗೂ ರಕ್ಷಣೆಯ ಭರವಸೆ ನೀಡಿ ತೀರ್ಪು ನೀಡಿದರು.
ಆದರೆ ಜತೆಗೆ ಮತ್ತೊಂದು ಟ್ವಿಸ್ಟ್ ನೀಡಿದರು. ಮದುವೆ ಫೋಟೋದಲ್ಲಿ ಈ ಜೋಡಿ ಮಾಸ್ಕ್ ಧರಿಸಿರಲಿಲ್ಲ. ಇವರಿಬ್ಬರ ಮದುವೆಯಲ್ಲಿ ಪಾಲ್ಗೊಂಡವರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿರಲಿಲ್ಲ. ಸಮಾಂಭಗಳಲ್ಲಿ ಅನುಸರಿಸಬೇಕಾದ ನಿಯಮಗಳು ಉಲ್ಲಂಘನೆಯಾಗಿದ್ದು, ಫೋಟೋದಲ್ಲಿ ಕಾಣಿಸುತ್ತಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ನಿಮಗೆ ರಕ್ಷಣೆ ನೀಡುತ್ತೇವೆ. ಆದರೆ ನೀವು 10,000 ರೂಪಾಯಿ ದಂಡ ತುಂಬಬೇಕು. ಕೊವಿಡ್-19 ನಿಯಮಗಳ ಉಲ್ಲಂಘನೆಗಾಗಿ ಈ ದಂಡ. ಇನ್ನು 15ದಿನಗಳಲ್ಲಿ ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಣ ಡಿಪೋಸಿಟ್ ಮಾಡಬೇಕು. ಹಾಗೇ, ಈ ದಂಪತಿ ನೀಡಿದ ಹಣವನ್ನು ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಲು ಬಳಸಬೇಕು ಎಂದು ಜಡ್ಜ್ ಆದೇಶ ನೀಡಿದರು.
ಅದೇ ರೀತಿ ಇನ್ನೊಂದು ಪ್ರಕರಣದಲ್ಲೂ ಅರ್ಜಿದಾರ ಜೋಡಿಗೆ ಹೀಗೇ ಸೂಚನೆ ನೀಡಿದರು. ನವಜೋಡಿಗೆ ರಕ್ಷಣೆಯನ್ನು ನೀಡಲು ಪೊಲೀಸ್ ಇಲಾಖೆಗೆ ಸೂಚಿಸುವ ಜತೆ ಅವರಿಗೆ 5000 ರೂ.ದಂಡ ವಿಧಿಸಿದರು. ಈ ಮದುವೆಯಲ್ಲಿ ಅಷ್ಟೊಂದು ಜನ ಪಾಲ್ಗೊಂಡಿರಲಿಲ್ಲ. ಆದರೆ ಜೋಡಿ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಕಡಿಮೆ ಮೊತ್ತದ ದಂಡ ವಿಧಿಸಲಾಗಿದೆ ಎಂದು ಜಡ್ಜ್ ಹೇಳಿದ್ದಾರೆ. ಇವರಿಗೂ ಅಷ್ಟೇ, ಅವರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಣ ಇಡಲು ತಿಳಿಸಿದ್ದು, ಅದನ್ನೂ ಮಾಸ್ಕ್ ವಿತರಣೆಗೆ ಬಳಸಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕರಾಚಿಯಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಬ್ಯಾಗ್ನಲ್ಲಿ ಸಿಕ್ಕ ವಸ್ತುವನ್ನು ನೋಡಿ ತಬ್ಬಿಬ್ಬಾದ ರಕ್ಷಣಾ ಸಿಬ್ಬಂದಿ
ಕೊವಿಡ್-19 ಮುನ್ನೆಚ್ಚರಿಕಾ ಕ್ರಮವಾಗಿ ಏ.9ರಿಂದಲೇ ಪಂಜಾಬ್ನಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಜನರು ಯಾವುದೇ ಕಾರಣಕ್ಕೆ ಮನೆಯಿಂದ ಹೊರಗೆ ಬರಬೇಕು ಎಂದರೂ ಮಾಸ್ಕ್ ಧರಿಸಿಯೇ ಬರಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ. (ಏಜೆನ್ಸೀಸ್)