ನ್ಯೂಸ್

ಐಫೋನ್​ಗಾಗಿ ಹೆತ್ತ ಮಗನನ್ನೇ ಮಾರಾಟ ಮಾಡಿದ ದಂಪತಿ

ಕೊಲ್ಕತ್ತ: ಆಘಾತಕಾರಿ ಘಟನೆಯೊಂದರಲ್ಲಿ ಐಫೋನ್​ ಖರೀದಿಸಿ ರೀಲ್ಸ್​ ಮಾಡುವ ಸಲುವಾಗಿ ದಂಪತಿಗಳಿಬ್ಬರು 8 ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪನಿಹತ್ತಿ ಗಾಂಧಿನಗರದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಸ್ಥಳೀಯ ಕೌನ್ಸಿಲರ್ ತಾರಕ್ ಗುಹಾ​ ನೀಡಿದ ದೂರಿನ ಮೇರೆಗೆ ಪೊಲೀಸರು ಮಗುವಿನ ತಂದೆ ಜಯದೇವ್​, ತಾಯಿ ಸತಿ ಹಾಗೂ ಏಳು ವರ್ಷದ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ವೃತ್ತಿಯಲ್ಲಿ ದಿನಗೂಲಿ ನೌಕರರಾಗಿರುವ ಜಯದೇವ್​ ಹಾಗೂ ಸತಿ ದಂಪತಿಗಳ ಬಳಿ ಐಫೋನ್​ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ರೀಲ್ಸ್​ ಮಾಡುವ ಸಲುವಾಗಿ ದಂಪತಿಗಳಿಬ್ಬರು ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳನ್ನು ಸುತ್ತಾಡಿದ್ದಾರೆ.

ಆರೋಪಿ

ದಂಪತಿಗಳ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ವಿಚಾರಿಸಿದಾಗ 8 ತಿಂಗಳ ಗಂಡು ಮಗುವನ್ನು ಮಾರಾಟ ಮಾಡಿ ಹೊಸ ಐಫೋನ್​ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಬಳಿಕ ಅದೇ ದಿನ ರಾತ್ರಿ ದಂಪತಿಗಳಿಬ್ಬರು ತಮ್ಮ ಮಗಳನ್ನು ಸಹ ಮಾರಾಟ ಮಾಡಲು ಯತ್ನಿಸಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ದಂಪತಿಗಳಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 7 ವರ್ಷದ ಬಾಲಕಿ ಹಾಗೂ ಎಂಟು ತಿಂಗಳ ಗಂಡು ಮಗುವನ್ನು ರಕ್ಷಿಸಿ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಸ್ಥಳೀಯ ಕಾರ್ಪೋರೇಟರ್​ ತಾರಕ್ ಗುಹಾ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.