ನ್ಯೂಸ್

ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

Mandara

ಭೋಪಾಲ್​: ನೀವೇನಾದರೂ ಟೀ ಪ್ರೇಮಿಗಳಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಅದರಲ್ಲೂ ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದರೆ ಅವರ ಬಳಿ ಟೀ ಮಾಡಲು ಹೇಳುವ ಮುನ್ನ ಹತ್ತು ಬಾರಿ ಯೋಚಿಸಿ. ಏಕೆಂದರೆ ಕೇವಲ ಟೀ ಕುಡಿದದ್ದಕ್ಕೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಾಜ್ಯದ ಅಶೋಕನಗರದಲ್ಲಿ ಅಪ್ಪ, ಅಮ್ಮ ಮತ್ತು ಮಗನ ಒಂದು ಸಣ್ಣ ಕುಟುಂಬ. ಅಪ್ಪ ಶ್ರೀಕೃಷ್ಣನ್​ ಅವರು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಅಮ್ಮ ಕೋಮಲಾಬಾಯಿ ಮನೆಯಲ್ಲೇ ಇರುವವರು. ಇಬ್ಬರಿಗೂ ವಯಸ್ಸಾಗಿತ್ತು. ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ಬಿಸಿ ಬಿಸಿ ಟೀ ಕುಡಿಯುವ ಅಭ್ಯಾಸವಿದ್ದ ಆ ಕುಟುಂಬಸ್ಥರು ಅಂದೂ ಅದೇ ಕೆಲಸವನ್ನು ಮಾಡಿದ್ದರು. ಬೆಳಗ್ಗೆ ಕುಡಿದ ಟೀ ವಿಷವಾಗಿ ಅವರನ್ನು ಬಲಿ ತೆಗೆದುಕೊಂಡಿದೆ.

ಅಂದು ಮುಂಜಾನೆ ಎದ್ದ ಕೋಮಲಬಾಯಿ ಟೀ ಮಾಡಲು ಮುಂದಾಗಿದ್ದಾರೆ. ಡಬ್ಬದಲ್ಲಿ ಟೀ ಪುಡಿ ಸ್ವಲ್ಪವೇ ಇದ್ದ ಹಿನ್ನೆಲೆ ಮತ್ತೊಂದು ಕೋಣೆಗೆ ಹೋಗಿ ಟೀ ಪುಡಿಯಿದ್ದ ಪ್ಯಾಕೆಟ್​ ತಂದಿದ್ದಾರೆ. ಅದನ್ನು ಹಾಕಿ ಟೀ ಮಾಡಿ ಗಂಡನಿಗೆ ಕೊಟ್ಟು, ತಾನೂ ಕುಡಿದಿದ್ದಾರೆ. ಟೀ ಕುಡಿದ ಗಂಡ ಅಲ್ಲಿಂದ ದೇವಸ್ಥಾನಕ್ಕೆ ಸೈಕಲ್​ನಲ್ಲಿ ತೆರಳಿದ್ದಾರೆ. ಇತ್ತ ಸ್ವಲ್ಪ ತಡವಾಗಿ ಎದ್ದ ಮಗ ಅಡುಗೆ ಮನೆಗೆ ಬಂದು ತಾನೂ ಟೀ ಕುಡಿದಿದ್ದಾನೆ. ಟೀ ಕುಡಿದು ಸ್ವಲ್ಪ ಹೊತ್ತಿನಲ್ಲಿ ಆತನಿಗೆ ತಲೆ ತಿರುಗಿದಂತಾಗಿದೆ. ಅಷ್ಟರಲ್ಲಿ ಓಡಿಬಂದ ಗ್ರಾಮಸ್ಥರು, 'ನಿಮ್ಮ ತಂದೆ ಅಲ್ಲಿ ರಸ್ತೆಯಲ್ಲಿ ಬಿದ್ದಿದ್ದಾರೆ' ಎಂದು ತಿಳಿಸಿದ್ದಾರೆ. ವಿಚಾರ ಕೇಳಿ ಸ್ವಲ್ಪ ಹೊತ್ತಿನಲ್ಲೇ ಮಗ ಮತ್ತು ಅಮ್ಮ ಇಬ್ಬರೂ ಎಚ್ಚರ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇತ್ತ ಅಮ್ಮ ಮತ್ತು ಮಗನನ್ನೂ ಆಸ್ಪತ್ರೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ಸೇರುವ ಮುನ್ನವೇ ತಾಯಿ ಕೊನೆಯುಸಿರೆಳೆದಿದ್ದಾರೆ. ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಟೀ ಕುಡಿದಾಕ್ಷಣ ಹೀಗೆ ಆಗಿರುವುದಕ್ಕೆ ಒಂದು ಕಾರಣವಿದೆ. ಸರಿಯಾಗಿ ಕಣ್ಣು ಕಾಣಿಸದಿದ್ದ ತಾಯಿ, ರೂಮಿನಲ್ಲಿದ್ದ ಟೀ ಪುಡಿ ಪ್ಯಾಕೆಟ್​ ತರುವ ಬದಲು ಕೀಟನಾಶಕವಿದ್ದ ಪ್ಯಾಕೆಟ್​ ತಂದಿದ್ದಾರೆ. ಅದನ್ನೇ ಟೀ ಪುಡಿಯೆಂದು ತಿಳಿದು ಟೀ ಮಾಡಿದ್ದಾರೆ. ಮೊದಲೇ ಸ್ವಲ್ಪ ಟೀ ಪುಡಿಯನ್ನು ಹಾಕಿದ್ದರಿಂದಾಗಿ ಟೀ ಬಗ್ಗೆ ಯಾರಿಗೂ ಯಾವ ಅನುಮಾನವೂ ಹುಟ್ಟಿರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)