ಬೆಂಗಳೂರು: ನಕಲಿ ನೋಟು ಚಲಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಇದೀಗ ಬ್ಯಾಂಕ್ಗಳ ಕರೆನ್ಸಿ ಚೆಸ್ಟ್ ಜಮೆ ಮಾಡಿದ ಹಣದಲ್ಲಿ 100 ರೂ. ಮತ್ತು 50 ರೂ. ಮುಖ ಬೆಲೆಯ ನಕಲಿ ನೋಟುಗಳು ಆರ್ಬಿಐನಲ್ಲಿ ಪತ್ತೆಯಾಗಿವೆ.
ನೃಪತುಂಗ ರಸ್ತೆಯಲ್ಲಿನ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಅಧಿಕಾರಿ, ನಕಲಿ ನೋಟು ಕುರಿತು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಕೆನರಾ ಬ್ಯಾಂಕ್ನ ಕರೆನ್ಸಿ ಚೆಸ್ಟ್ ಮತ್ತು ಇತರ ಕರೆನ್ಸಿ ಚೆಸ್ಟ್ ವ್ಯವಸ್ಥಾಪಕರು ಮೇ 1ರಿಂದ ಜೂನ್ 30ರ ವರೆಗೆ ಆರ್ಬಿಐಗೆ ಹಳೆಯ ನೋಟುಗಳನ್ನು ಜಮೆ ಮಾಡಿದರು. ಈ ವೇಳೆ 100 ರೂ. ಮುಖಬೆಲೆಯ 15 ನೋಟು ಮತ್ತು 50 ರೂಪಾಯಿ ಮುಖಬೆಲೆಯ 15 ನಕಲಿ ನೋಟು ಪತ್ತೆಯಾಗಿವೆ.
ನಕಲಿ ನೋಟು ಚಲಾವಣೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.