ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ದೀರ್ಘಕಾಲೀನ ಪರಿಹಾರವಲ್ಲ ಎಂದೇ ವಾದಿಸುತ್ತ ಪ್ರೊಫೆಸರ್ ರೀಓಪನ್ ಎಂದೇ ಹೆಸರಾಗಿದ್ದಾರೆ ಆಕ್ಸ್ಫರ್ಡ್ ವಿವಿ ಪ್ರಾಧ್ಯಾಪಕಿ, ಸಾಂಕ್ರಾಮಿಕ ರೋಗಗಳ ತಜ್ಞರಾದ ಭಾರತೀಯ ಮೂಲದ ಸುನೇತ್ರಾ ಗುಪ್ತಾ. ಇವರು ಹೇಳುವ ಪ್ರಕಾರ ಕರೊನಾ ರೋಗಿಗಳಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಅಗತ್ಯವಿಲ್ಲ...!
ಶೀತಜ್ವರ ಬಂದರೆ ನಾವು ಹೇಗೆ ಹೆದರಬೇಕಾಗಿಲ್ಲವೋ, ಅದೇ ರೀತಿ ಆರೋಗ್ಯವಂತರಾಗಿರುವ, ಯಾವುದೇ ಕಾಯಿಲೆಗಳಿಲ್ಲದ ವ್ಯಕ್ತಿಗಳು ಕೂಡ ಕರೊನಾಗೂ ಹೆದರಬೇಕಾಗಿಲ್ಲ. ನೆಗಡಿ, ಕೆಮ್ಮು, ಶೀತಜ್ವರದಷ್ಟೇ ಕರೊನಾ ಕೂಡ ಸಾಮಾನ್ಯ ಸಂಗತಿಯಾಗಲಿದೆ ಎಂದು ಹೇಳುತ್ತಾರೆ ಗುಪ್ತಾ.
ಸದ್ಯ ಕಂಡು ಹಿಡಿಯಲಾಗುತ್ತಿರುವ ಲಸಿಕೆ ಯಶಸ್ವಿಯಾದರೂ ಅದನ್ನು ಕರೊನಾದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾದವರ ಮೇಲೆ ಪ್ರಯೋಗಿಸಲಾಗುತ್ತದೆ. ಇನ್ನುಳಿದಂತೆ, ಹೆಚ್ಚಿನವರು ಈ ಕರೊನಾಗೆ ಹೆದರಬೇಕಾಗಿಲ್ಲ ಎನ್ನುವುದು ಅವರ ಅಭಿಪ್ರಾಯ. ಕರೊನಾ ಸಂಕಷ್ಟ ಸ್ವಾಭಾವಿಕವಾಗಿಯೇ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಶೀತಜ್ವರದಂತೆಯೇ ನಮ್ಮ ಬದುಕಿನ ಭಾಗವಾಗಲಿದೆ ಎಂದು ಅವರು ವಿಶ್ವಾಸ, ಭರವಸೆ ನೀಡುತ್ತಾರೆ.
ಶೀತಜ್ವರದಷ್ಟೂ ಇದು ಮಾರಕವಾಗಿರಲಾರದು. ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಜನರು ಇದರಿಂದ ಮರಣವನ್ನಪ್ಪಬಹುದು. ಇದಕ್ಕೆ ಲಸಿಕೆ ಕಂಡುಹಿಡಿಯುವುದು ಕಷ್ಟದ ಕೆಲಸವೇನಲ್ಲ. ಈ ವರ್ಷಾಂತ್ಯಕ್ಕೆ ಲಸಿಕೆ ಸಿದ್ಧವಾಗಬಹುದು ಎಂದು ಹೇಳುತ್ತಾರೆ.
ಇದನ್ನೂ ಓದಿ; ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್ಫರ್ಡ್ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು
ಕರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಕ್ರಮಗಳು ಉಪಯುಕ್ತ ಎನಿಸಿದರೂ, ದೀರ್ಘಕಾಲದವರೆಗೆ ವೈರಸ್ಅನ್ನು ದೂರವಿಡಲಾರದು. ಆದರೆ, ವೈದ್ಯಕೀಯ ಕ್ರಮ ಅಥವಾ ನೆರವಿಲ್ಲದೆ ಕರೊನಾ ನಿಯಂತ್ರಣ ಕಷ್ಟಸಾಧ್ಯವಾಗಬಹುದು. ಲಾಕ್ಡೌನ್ನಿಂದಾಗಿ ಕರೊನಾ ದೂರವಿಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ದೇಶಗಳಲ್ಲಿ ಮತ್ತೆ ವೈರಸ್ ಕಾಣಿಸಿಕೊಳ್ಳುತ್ತಿದೆ ಎಂದರು.