ನ್ಯೂಸ್

ಕುದಿಬಿಂದು ನೀರಿನಲ್ಲಿ ಕರೊನಾ ವೈರಾಣು ಸಂಪೂರ್ಣ ನಾಶವಾಗುತ್ತೆ

ಮಾಸ್ಕೋ: ಕುದಿಬಿಂದು ತಾಪಮಾನದ ನೀರಿನಲ್ಲಿ ಕರೊನಾ ವೈರಾಣುವನ್ನು ಇರಿಸಿದಾಗ 72 ಗಂಟೆಯೊಳಗೆ ಅದು ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ರಷ್ಯಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಟರ್ಕಿಯ ಅಂಕಾರಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂಡೌಲು ಏಜೆನ್ಸಿಯಲ್ಲಿ ರಷ್ಯಾ ವಿಜ್ಞಾನಿಗಳ ಪ್ರಯೋಗದ ವಿವರಗಳು ಪ್ರಕಟವಾಗಿವೆ. ರಷ್ಯಾದ ಸ್ಟೇಟ್​ ರಿಸರ್ಚ್​ ಸೆಂಟರ್​ ಆಫ್​ ವೈರಾಲಜಿ ಆ್ಯಂಡ್​ ಬಯೋಟೆಕ್ನಾಲಜಿ ವೆಕ್ಟರ್​ ಈ ಅಧ್ಯಯನ ನಡೆಸಿದ್ದು, ಕುದಿಬಿಂದು ತಾಪಮಾನದ ನೀರಿನಲ್ಲಿ ಕೋವಿಡ್​-19 ಸೋಂಕು ಉಂಟು ಮಾಡುವ SARS-CoV-2 ವೈರಾಣುವನ್ನು ಇರಿಸಿದರೆ ಅದು ತಕ್ಷಣವೇ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಹೇಳಲಾಗಿದೆ.

ಕೊಠಡಿ ತಾಪಮಾನದ ನೀರಿನಲ್ಲಿ 24 ಗಂಟೆ ಇರಿಸಿದರೆ ಶೇ.90 ಕರೊನಾ ವೈರಾಣು ನಾಶವಾಗುತ್ತವೆ. 72 ಗಂಟೆ ಇರಿಸಿದರೆ ಶೇ.99.9 ವೈರಾಣು ನಾಶವಾಗುತ್ತವೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಹೇಳುವುದಾದರೆ ಕರೊನಾವೈರಾಣುವಿನ ಸ್ಥಿತಿಸ್ಥಾಪಕತ್ವ ನೇರವಾಗಿ ನೀರಿನ ತಾಪಮಾನವನ್ನು ಅವಲಂಬಿಸಿದೆ ಎಂಬುದು ಗೊತ್ತಾಗುತ್ತದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ನಿರ್ದಿಷ್ಟವಾದ ಪರಿಸ್ಥಿತಿಯಲ್ಲಿ ಕರೊನಾವೈರಾಣು ನೀರಿನಲ್ಲಿ ಜೀವಿಸಬಲ್ಲದು ಎಂಬುದು ಈ ಅಧ್ಯಯನ ಹೇಳಿದರೂ, ಅದು ಸಮುದ್ರದ ನೀರು ಮತ್ತು ಸಿಹಿನೀರಿನಲ್ಲಿ ದ್ವಿಗುಣಗೊಳ್ಳುವುದಿಲ್ಲ. ಸ್ಟೇನ್​ಲೆಸ್​ ಸ್ಟೀಲ್, ಲಿನೋಲಿಯಂ, ಗಾಜು, ಪ್ಲಾಸ್ಟಿಕ್​ ಮತ್ತು ಸೆರಾಮಿಕ್​ ವಸ್ತುಗಳ ಮೇಲ್ಮೈ ಮೇಲೆ ಅವು 48 ಗಂಟೆ ಜೀವಂತ ಇರುತ್ತವೆ ಎಂದು ಹೇಳಿದ್ದಾರೆ.

ಆದರೆ, ಮನೆಯಲ್ಲಿ ಬಳಸುವ ಕೀಟಾಣುನಾಶಕಗಳು SARS-CoV-2 ವೈರಾಣುವನ್ನು ಸಂಪೂರ್ಣ ನಾಶಪಡಿಸುತ್ತವೆ. ಅದರಲ್ಲೂ ವಿಶೇಷವಾಗಿ ಶೇ.30 ತೀವ್ರತೆಯ ಈಥೈಲ್​ ಮತ್ತು ಐಸೋಪ್ರೊಪೈಲ್​ ಆಲ್ಕೋಹಾಲ್​ನ ಮಿಶ್ರಣ ಅರ್ಧನಿಮಿಷದಲ್ಲಿ ವೈರಾಣುವಿನ ಮಿಲಿಯನ್​ ಪಾರ್ಟಿಕಲ್​ಗಳನ್ನು ನಾಶಪಡಿಸಬಲ್ಲದು ಎಂದು ಹೇಳಿದ್ದಾರೆ. ತನ್ಮೂಲಕ ಈ ಅಧ್ಯಯನ ಶೇ.60 ತೀವ್ರತೆಯ ಈಥೈಲ್​ ಮತ್ತು ಐಸೋಪ್ರೊಪೈಲ್​ ಆಲ್ಕೋಹಾಲ್​ನ ಮಿಶ್ರಣ ಮಾತ್ರವೇ ಕರೊನಾವೈರಾಣುವನ್ನು ಕೊಲ್ಲಬಲ್ಲದು ಎಂಬ ಹಿಂದಿನ ಅಧ್ಯಯನವನ್ನು ಹುಸಿಗೊಳಿಸಿದೆ.

ಕ್ಲೋರಿನ್​ ಅಂಶವಿರುವ ಕೀಟಾಣುನಾಶಕಗಳು ನೆಲದ ಮೇಲಿರುವ ಕರೊನಾವೈರಾಣುಗಳನ್ನು ಕೇವಲ 30 ಸೆಕೆಂಡ್​ಗಳಲ್ಲಿ ನಾಶಪಡಿಸಬಲ್ಲವು ಎಂಬುದು ಕೂಡ ಈ ಅಧ್ಯಯನದಲ್ಲಿ ಸ್ಪಷ್ಟವಾಗಿದೆ.