ಬೆಂಗಳೂರು: ಕರೊನಾ ಯೋಧರನ್ನು ಭೇಷ್ ಎನ್ನುವ ಮೂಲಕ ಸರ್ಕಾರ ಕೇವಲ ಬಾಯಿ ಚಪಲ ತೀರಿಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ರಾಜ್ಯದಲ್ಲಿ 500ಕ್ಕೂ ಹೆಚ್ಚು ಕರೊನಾ ಯೋಧರು ಜೀವ ಕಳೆದುಕೊಂಡಿದ್ದು, ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ ಎಂಬ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹುದು. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕರೊನಾ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ಕಿಡಿಕಾರಿದ್ದಾರೆ. ವಿದ್ಯಾಗಮ ಯೋಜನೆಯಡಿ ಕೆಲಸ ಮಾಡಿದ ಶಿಕ್ಷಕಿಯ ಪುತ್ರಿಯೊಬ್ಬಳು ತನ್ನ ಹೆತ್ತ ತಾಯಿಯನ್ನು ಉಳಿಸಿಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆದರೆ, ಶಿಕ್ಷಕಿಯ ಚಿಕಿತ್ಸಾ ವೆಚ್ಚದ ಬಿಲ್ ಕೊಡುತ್ತೇನೆ ಎಂಬ ಹೃದಯಹೀನ ಉತ್ತರ ಕೊಡುವ ಈ ರಾಜ್ಯದ ಶಿಕ್ಷಣ ಮಂತ್ರಿಯಿಂದ ಹಾಗೂ ಇಂತಹ ಮನಸ್ಥಿತಿಯ ಸರ್ಕಾರದಿಂದ ಕರೊನಾ ವಾರಿಯರ್‌ಗಳ ಕುಟುಂಬಗಳು ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಸರಣಿ ಟ್ವೀಟ್ ಮಾಡಿರುವ ಅವರು ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
60 ವೈದ್ಯರು, 20 ನರ್ಸ್‌ಗಳು, 82 ಪೊಲೀಸರು, 10 ಪೌರ ಕಾರ್ಮಿಕರು, 96 ಚಾಲಕ-ನಿರ್ವಾಹಕರು, 235 ಶಿಕ್ಷಕರು- ಉಪನ್ಯಾಸಕರು, 10 ಆಶಾ ಕಾರ್ಯಕರ್ತೆಯರು ಹೀಗೆ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪತ್ರಕರ್ತರು, ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ವಲಯದ ನೌಕರರು ಕೂಡ ಜೀವ ತೆತ್ತಿದ್ದಾರೆ. ಇವರ ಕುಟುಂಬಗಳಿಗೆ ಸರ್ಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಲ್ಲವೇ? ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ತಮಟೆ ಬಾರಿಸಿ, ದೀಪ ಹಚ್ಚಿ, ಜನಪ್ರಿಯತೆ ಗಳಿಸಿ, ಪೋಷಾಕು ಕೊಟ್ಟರೆ ಕರೊನಾ ವಾರಿಯರ್‌ಗಳು ಹಾಗೂ ಅವರ ಕುಟುಂಬಗಳು ಹೇಗೆ ಸಮಾಧಾನ ಪಟ್ಟುಕೊಳ್ಳಬೇಕು? ಕನಿಷ್ಠಪಕ್ಷ ಕರೊನಾ ವಾರಿಯರ್‌ಗಳ ಸುರಕ್ಷತೆಗೆ ಸರ್ಕಾರ ಕ್ರಮಕೈಗೊಳ್ಳಬೇಕು. ಅದನ್ನೂ ಮೀರಿ ಜೀವ ಕಳೆದುಕೊಳ್ಳುವ ಕುಟುಂಬಗಳಿಗೆ ಪರಿಹಾರ ಕೊಡದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ! ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.