ನ್ಯೂಸ್

ಕಾರ್ಪೋರೇಟ್​ ಜಗತ್ತಿನಲ್ಲಿ ಒತ್ತಡ ನಿಭಾಯಿಸುವುದು ಸುಲಭ!

ಈದಿನಗಳಲ್ಲಿ ಕಾರ್ಪೆರೇಟ್ ಜಗತ್ತಿನಲ್ಲಿ ಅನೇಕರು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಸ್ನೇಹಿತ ಅಥವಾ ಸಹೋದ್ಯೋಗಿಗಳೊಂದಿಗೆ ಏನಾದರೂ ಅಚಾತುರ್ಯ ಎದುರಾದರೆ, ನೀವು ಒಳಗಿನಿಂದ ಕಠೋರವಾಗಿ, ನಕಾರಾತ್ಮಕತೆ ಅನುಭವಿಸುತ್ತೀರಿ. ಆಮೇಲೆ ಎಲ್ಲಿಗೆ ಹೋದರೂ, ಅದೇ ನಕಾರಾತ್ಮಕತೆಯನ್ನು ತೆಗೆದುಕೊಂಡು ಹೋಗುತ್ತೀರಿ.

ಒತ್ತಡವು ನಮ್ಮ ಯೋಚನೆಗಳು, ಭಾವನೆಗಳು ಹಾಗೂ ವರ್ತನೆಯ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ಒತ್ತಡವು ಆವರಿಸಿಬಿಟ್ಟರೆ ಅದೊಂದು ದುರಂತವೇ ಸರಿ. ಹಾಗಿದ್ದರೆ ಕಚೇರಿಯ ಸ್ಥಳದಲ್ಲಿ, ಒತ್ತಡವನ್ನು ನಿಭಾಯಿಸಿ ಕೆಲಸದಲ್ಲಿ ಯಶಸ್ವಿಯಾಗುವುದು ಹೇಗೆ? ನಿಜವಾಗಿ ಹೇಳುವುದಾದರೆ ಇದು ತುಂಬ ಸುಲಭ! ಇದು ಒಂದು ಸೈಕಲ್ ಓಡಿಸುವಂತೆ. ನೀವು ಸೈಕಲ್ ಓಡಿಸುವಾಗ ಅದನ್ನು ಹೇಗೆ ಸಮತೋಲನದಲ್ಲಿ ಹಿಡಿದುಕೊಳ್ಳುವಿರೋ ಅದೇ ರೀತಿ ಬೇರೆ ಕೆಲಸದ ವಿಷಯದಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. ಸೈಕಲ್ ಒಂದು ಬದಿಗೆ ವಾಲಲು ಪ್ರಾರಂಭಿಸಿದಾಗ, ನೀವು ಅದನ್ನು ಸಮತೋಲನಕ್ಕೆ ತರುತ್ತೀರಿ. ಸೈಕಲ್ ಓಡಿಸುವ ಗುಟ್ಟೆಂದರೆ - ಸಮತೋಲನ! ಆದ್ದರಿಂದ ಕೆಲಸ ಮತ್ತು ಕುಟುಂಬ ಜೀವನದ ನಡುವೆ ಸಮತೋಲನವಿರಿಸಿ.

ಕಾರ್ಪೆರೇಟ್ ಕ್ಷೇತ್ರದಲ್ಲಿ್ಲ ಒತ್ತಡಕ್ಕೆ ಪ್ರಮುಖ ಕಾರಣ ವೆಂದರೆ, ಕಚೇರಿಯ ಕೆಲಸ ಮತ್ತು ಕುಟುಂಬದ ಕೆಲಸದಲ್ಲಿ ಸಮತೋಲನದ ಕೊರತೆ. ಕೆಲವು ಜನರು ಯಾವಾಗಲೂ ಕಚೇರಿಯ ಕೆಲಸದಲ್ಲಿ ನಿರತರಾಗಿರುತ್ತಾರೆ, ಅದರಿಂದಾಗಿ ಕುಟುಂಬದ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಾರೆ. ಇನ್ನು ಕೆಲವರು ಕುಟುಂಬದಲ್ಲಿ ಅಷ್ಟು ತೊಡಗಿಸಿಕೊಂಡಿರುವುದರಿಂದ, ಅವರ ಜಗತ್ತು ಮನೆಯ ನಾಲ್ಕು ಗೋಡೆಗಳ ಒಳಗೆ ಸೀಮಿತವಾಗಿರುತ್ತದೆ; ಈ ಎರಡೂ ಪರಿಸ್ಥಿತಿಯಲ್ಲಿಯೂ ನೀವು ನಿಮ್ಮ ಸಂಪೂರ್ಣ ಶಕ್ತಿಯನ್ನು ಉಪಯೋಗಿಸುವುದಿಲ್ಲ. ಹೀಗಾಗಿ, ಒತ್ತಡವನ್ನು ತೊಡೆದುಹಾಕಲು ಮೊದಲ ಹೆಜ್ಜೆ ಎಂದರೆ, ಕುಟುಂಬ, ಸಮಾಜ ಮತ್ತು ಕಚೇರಿಯ ಕೆಲಸದ ನಡುವೆ ಸಮತೋಲನವನ್ನು ಇಡುವುದು.

ಉತ್ತಮ ಜೀವನಶೈಲಿ ಮತ್ತು ವಿಶ್ರಾಂತಿ: ಒತ್ತಡದ ಮತ್ತೊಂದು ಕಾರಣ - ಸರಿಯಿಲ್ಲದ ಜೀವನಶೈಲಿ ಹಾಗೂ ವಿಶ್ರಾಂತಿಯ ಕೊರತೆ! ಅತಿಯಾದ ಕೆಲಸದ ಒತ್ತಡದಲ್ಲಿ ನಮ್ಮ ಆಹಾರ ಮತ್ತು ನಿದ್ರೆ ಬಗ್ಗೆ ಗಮನಹರಿಸುವುದಿಲ್ಲ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ, ನೀವು ಎಷ್ಟೇ ಕಾರ್ಯನಿರತರಾಗಿರಲಿ, ಆಹಾರ ಮತ್ತು ನಿದ್ರೆಗೆ ನಿರ್ದಿಷ್ಟ ಸಮಯವಿರಲಿ. ಪ್ರತಿದಿನವೂ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನಕ್ಕಾಗಿ ಸಮಯ ಕೊಡಿ. ನೀವು ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡಿದಾಗ, ಸಹಜವಾಗಿ ವರ್ತಮಾನದ ಕ್ಷಣದಲ್ಲಿರುತ್ತೀರಿ. ನಕಾರಾತ್ಮಕತೆ ಹಾಗೂ ಒತ್ತಡವನ್ನು ತೊಡೆದುಹಾಕಲು ಧ್ಯಾನವು ಸಹಾಯ ಮಾಡುತ್ತದೆ. ಅಲ್ಲದೆ, ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಿಸುತ್ತದೆ, ಏಕಾಗ್ರತೆಯನ್ನು ವೃದ್ಧಿಸುತ್ತದೆ. ನಿಮ್ಮ ಅಲೋಚನೆ ಶಕ್ತಿಯೂ ಹೆಚ್ಚುತ್ತದೆ. ಧ್ಯಾನವು ನಿಮ್ಮ ಸುತ್ತಲು ಸಕಾರಾತ್ಮಕ ಅಲೆಗಳನ್ನು ಉಂಟುಮಾಡುತ್ತದೆ. ಇದರಿಂದ ನೀವು ಭಾವನಾತ್ಮಕವಾಗಿ ಬಹಳ ಹಗುರ, ಶುದ್ಧ ಮತ್ತು ಮೃದುತ್ವ ಅನುಭವಿಸುತ್ತೀರಿ. ಇದು ನಿಮಗೆ ಸ್ವಲ್ಪ ಸಮಯದಲ್ಲೇ ಆಳವಾದ ವಿಶ್ರಾಂತಿಯನ್ನು ನೀಡುತ್ತದೆ.

ಸೃಜನಾತ್ಮಕ ಚಟುವಟಿಕೆ: ಸಾಮಾನ್ಯವಾಗಿ ಕಾರ್ಪೆರೇಟ್ ಕ್ಷೇತ್ರದಲ್ಲಿರುವವರು ಚರ್ಚೆ, ಯೋಜನೆ ಮತ್ತು ವಿಶ್ಲೇಷಣೆಯಂಥ ರ್ತಾಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಆದರೆ ಕಲೆ, ಸಾಹಿತ್ಯ ಮತ್ತು ಸಂಗೀತದಂತಹ ಸೃಜನಾತ್ಮಕ ಚಟುವಟಿಕೆಗಳಿಗೆ ಸಮಯ ಕೊಡುವುದಿಲ್ಲ. ಇದರ ಪರಿಣಾಮ, ಅವರ ಮಿದುಳಿನ ಎಡ ಭಾಗ ಕೆಲಸ ಮಾಡುತ್ತದೆ, ಬಲ ಭಾಗವು ಅಷ್ಟು ಕೆಲಸ ಮಾಡುವುದಿಲ್ಲ. ಅದರಿಂದ ನಮ್ಮ ಮಿದುಳಿನಲ್ಲಿ ಸಮತೋಲನ ಇರುವುದಿಲ್ಲ. ಸಂಗೀತ, ಕಾವ್ಯ, ಸಾಹಿತ್ಯ ಮತ್ತು ಕಲಾ ಅಭಿವ್ಯಕ್ತಿಯ ಮೂಲಕ, ಒತ್ತಡದಿಂದ ಮುಕ್ತಿ ಪಡೆಯಬಹುದು. ಜೊತೆಗೆ, ಮಿದುಳಿನ ಎರಡು ಭಾಗಗಳೂ ಸಮತೋಲನದಲ್ಲಿರುತ್ತವೆ. ನಿಮ್ಮಲ್ಲಿ ಹೆಚ್ಚು ಸೃಜನಾತ್ಮಕತೆ, ಸ್ಪಷ್ಟತೆ, ಕಾರ್ಯಕ್ಷಮತೆ ಮತ್ತು ಆಳವಾದ ವಿಶ್ರಾಂತಿಯ ಅನುಭವ ಉಂಟಾಗುತ್ತದೆ.

ಅನೇಕ ಬಾರಿ, ನಿರಂತರವಾಗಿ ಒಂದೇ ಕೆಲಸವನ್ನು ಮಾಡುವುದರಿಂದ, ನೀರಸವೆನಿಸುತ್ತದೆ. ಇದು ನಕಾರಾತ್ಮಕತೆಗೆ ಕಾರಣವಾಗುತ್ತದೆ. ಸುತ್ತಲಿನ ಜನರಿಗೆ ನೀವು ಉಪಯುಕ್ತವಾಗಿರಿ, ಅವರ ಸೇವೆಯನ್ನು ಮಾಡಿರಿ. ಸೇವೆ ಮಾಡುವುದರಿಂದ ಕೂಡ ನಕರಾತ್ಮಕತೆಯಿಂದ ಹೊರ ಬರಬಹುದು. ಸೇವೆಯ ಅರ್ಥವೇನೆಂದರೆ, ಪ್ರತಿಫಲ ಅಪೇಕ್ಷೆ ಇಲ್ಲದೆ ಸಹಾಯ ಮಾಡುವುದು. ಅವಶ್ಯಕತೆ ಇರುವ ವ್ಯಕ್ತಿಗೆ ನಿಮ್ಮ ಸಮಯ ನೀಡಿ, ದಾನ ಮಾಡಿ ಅಥವಾ ಸಕಾರಾತ್ಮಕ ಮಾತುಗಳನ್ನು ಆಡಿ. ಇತರರ ಸೇವೆಯನ್ನು ಮಾಡುವುದು ನಿಮ್ಮ ಒತ್ತಡ ನಿವಾರಣೆಗೆ ಅತ್ಯುತ್ತಮ ಮಾರ್ಗ. ನೀವು ಸೇವೆ ಮತ್ತು ದಯೆಯುಳ್ಳ ಕಾರ್ಯಗಳಲ್ಲಿ ತೊಡಗಿದ್ದಾಗ, ನಿಮಗೆ ತಕ್ಷಣವೇ ಆಂತರಿಕ ಶಾಂತಿ ದೊರೆಯುತ್ತದೆ.