ಪಟ್ನಾ: ನಾನು ಹೇಳಿದಂತೆ ಕೇಳು ಇಲ್ಲದಿದ್ರೆ ನಿನ್ನ ಮೇಲೆ ಕೇಸ್ ಹಾಕ್ತೀನಿ ಎಂದು ಪೊಲೀಸ್ ಅಧಿಕಾರಿಯೊಬ್ಬರು (Police Officer) ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿರುವ ಘಟನೆ ಬಿಹಾರದ (Bihar) ಸಮಸ್ತೀಪುರ ಜಿಲ್ಲೆಯಲ್ಲಿ ನಡೆದಿದೆ.
ಸಮಸ್ತೀಪುರ ಜಿಲ್ಲೆಯ ಪಟೋರಿ ಪೊಲೀಸ್ ಠಾಣಾಧಿಕಾರಿ ಮೊಹಮ್ಮದ್ ಬಲಾಲ್ ಖಾನ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಧಿಕಾರ ದುರ್ಬಳಕೆಯ ಬಗ್ಗೆ ಅನುಮಾನಗಳು ಮೂಡಲು ಶುರುವಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಮಹಿಳೆಯೊಬ್ಬರಿಗೆ ಅಧಿಕಾರಿ ನಾನು ಹೇಳಿದಂತೆ ಕೇಳಿದರೆ ನಿನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಇಲ್ಲದಿದ್ದರೆ ನಿನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಅಧಿಕಾರಿ ಮಹಿಳೆಗೆ ಬೆದರಿಸುತ್ತಿರುವುದನ್ನು ನೋಡಬಹುದಾಗಿದೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಮಹಿಳೆ ಅಧಿಕಾರಿ ಬಳಿ ಬೇಡಿಕೊಳ್ಳುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ವೈರಲ್ ವಿಡಿಯೋ (Video Viral)ಕುರಿತಾಗಿ ಪ್ರತಿಕ್ರಿಯಿಸಿರುವ ಸಮಸ್ಥೀಪುರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಪ್ರಕರಣ ಒಂದರ ವಿಚಾರಣೆಗೆ ಮಹಿಳೆ ತನ್ನ ಕುಟುಂಬಸ್ಥರೊಂದಿಗೆ ಬಂದಿದ್ದರು. ಈ ವೇಳೆ ಅಧಿಕಾರಿ ಮೊಹಮ್ಮದ್ ಪ್ರತ್ಯೇಕವಾಗಿ ವಿಚಾರಣೆ ನಡೆಸುವುದಿದೆ ಎಂದು ಹೇಳಿ ಆಕೆಯನ್ನು ಠಾಣೆಯ ಹತ್ತಿರ ಇದ್ದ ಮನೆ ಒಂದಕ್ಕೆ ಕರೆದುಕೊಂಡು ಹೋಗಿ ಆಕೆಗೆ ಬಲವಂತೆ ಮಾಡಿದ್ದಾರೆ. ಮಹಿಳೆ ವಿಡಿಯೋವನ್ನು ಮಾಡಿಕೊಂಡಿದ್ದು, ಅದನ್ನು ಆಧರಿಸಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಘಟನೆ ಸಂಬಂಧ FIR ದಾಖಲಿಸಲಾಗಿದೆ ಎಂದು ಸಮಸ್ಥೀಪುರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.