ನವದೆಹಲಿ: ಪ್ರಯಾಣಿಕರು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುವ ಸಾಕಷ್ಟು ಪ್ರಕರಣಗಳು ನಿತ್ಯವು ವರದಿಯಾಗುತ್ತಲೇ ಇರುತ್ತವೆ. ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸನ್ನು ಸಾಧಿಸಿಲ್ಲ. ಸ್ಥಳೀಯ ವಾಸಿಗಳು ಈ ಕೃತ್ಯವನ್ನು ಎಸಗುವುದು ಸಾಮಾನ್ಯ ಸಂಗತಿ. ಆದರೆ, ಪೊಲೀಸ್ ಅಧಿಕಾರಿಯೇ ಟಿಕೆಟ್ ಇಲ್ಲದೆ ಅದರಲ್ಲೂ ಪ್ರತಿಷ್ಠಿತ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಇದೀಗ ಮೂಡಿದೆ.
ಪೊಲೀಸ್ ಅಧಿಕಾರಿಯೊಬ್ಬರು ವಂದೇ ಭಾರತ್ ರೈಲಿನಲ್ಲಿ ಟಿಕೆಟ್ ಇಲ್ಲದೆ, ಟೀ ಸವಿಯುತ್ತಾ ಪ್ರಯಾಣ ಮಾಡುವಾಗ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ)ರ ಕೈಗೆ ಸಿಕ್ಕಿಬಿದ್ದು, ವಾಗ್ವಾದ ನಡೆಸಿದ ಪ್ರಸಂಗ ಜರುಗಿದೆ. ಈ ಘಟನೆ ಎಲ್ಲಿ ನಡೆದಿದ್ದು ಎಂಬುದರ ಮಾಹಿತಿ ಇಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದೇ ಕೋಚ್‌ನಲ್ಲಿ ಕುಳಿತಿದ್ದ ಕೆಲವು ಪ್ರಯಾಣಿಕರು ಪೊಲೀಸ್ ಅಧಿಕಾರಿ ಮತ್ತು ಟಿಟಿಇ ನಡುವಿನ ವಾಗ್ವಾದವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ. ತಕ್ಷಣವೇ ವಿಡಿಯೋ ವೈರಲ್ ಆಗಿದ್ದು, ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಯ ನಾಚಿಕೆಗೇಡಿನ ಕೃತ್ಯವನ್ನು ಖಂಡಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ತಾನು ಪ್ರಯಾಣ ಮಾಡಬೇಕಿದ್ದ ರೈಲು ಮಿಸ್ ಆದ ಬಳಿಕವೇ ವಂದೇ ಭಾರತ್ ರೈಲನ್ನು ಏರಿದ್ದಾಗಿ ಪೊಲೀಸ್ ಅಧಿಕಾರಿ ಸಮರ್ಥನೆ ನೀಡಿದ್ದಾರೆ. ಅಲ್ಲದೆ, ಟಿಟಿಇ ಬಳಿ ಕ್ಷಮೆ ಸಹ ಯಾಚಿಸಿದ್ದಾರೆ. ಆದರೆ, ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಅಧಿಕಾರಿಯನ್ನು ಮುಂದಿನ ನಿಲ್ದಾಣದಲ್ಲಿ ಕೆಳಗಿಳಿಸುವಂತೆ ಟಿಟಿಇ ಬಳಿ ಕೇಳಿದರು.
ವಿಡಿಯೋಗೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಮಂದಿ ಹೇಗೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ನೋಡಿ, ಸಮವಸ್ತ್ರವನ್ನು ಧರಿಸಿದರೆ ಎಲ್ಲಾ ಅಧಿಕಾರವೂ ಇದೆ ಎಂದು ಭಾವಿಸಿದ್ದಾರೆ ಮತ್ತು ರಸ್ತೆಯಲ್ಲಿ ಸಾಮಾನ್ಯ ನಾಗರಿಕನಿಗೆ ಈ ರೀತಿ ಆಗಿದ್ದರೆ ಇದೇ ಪೊಲೀಸರು ಹಿಂದು-ಮುಂದು ನೋಡದೆಯೇ ಟ್ರಾಫಿಕ್ ಚಲನ್ ನೀಡುತ್ತಿದ್ದರು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್)