ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮತಾಂತರ ( Conversion ) ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಪತಿ 12 ಮಹಿಳೆಯರನ್ನು ಮದುವೆಯಾಗಿ ಮತಾಂತರ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಮಹಿಳೆ, ಪತಿಯ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.
ಈ ಪ್ರಕರಣ ರಾಂಚಿಯ ಬರಿಯಾತು ಸತ್ತಾರ್ ಕಾಲನಿಗೆ ಸಂಬಂಧಿಸಿದೆ. ಪೌಲಿನಾ ಹೆಮ್ರೋಮ್ ಎಂಬಾಕೆ ತನ್ನ ಪತಿ ಫಿರೋಜ್ ಆಲಂ ವಿರುದ್ಧ ಈ ಆರೋಪ ಮಾಡಿದ್ದಾಳೆ. ನನ್ನನ್ನು ಕೂಡ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ನಾನು ಈ ಹಿಂದೆ ಕ್ರಿಶ್ಚಿಯನ್ ಧರ್ಮವನ್ನು ಪಾಲನೆ ಮಾಡುತ್ತಿದ್ದೆ ಎಂದು ಹೆಮ್ರೋಮ್ ಹೇಳಿದ್ದಾರೆ.
1992ರಲ್ಲಿ ನಾನು ಫಿರೋಜ್ ಆಲಂ ಅವರನ್ನು ವಿವಾಹವಾದೆ. ನಾನು ಆತನ ಎರಡನೇ ಹೆಂಡತಿ. ಮದುವೆಯ ಸಮಯದಲ್ಲಿ ತನಗೆ ಪ್ರೀತಿ ಮತ್ತು ಗೌರವವನ್ನು ನೀಡುವುದಾಗಿ ಭರವಸೆ ನೀಡಿದ್ದರು ಆದರೆ, ಮದುವೆಯ ನಂತರ ಪರಿಸ್ಥಿತಿ ಬದಲಾಯಿತು. ಫಿರೋಜ್ ಮನೆಯಲ್ಲಿ ಸದ್ಯ ನಾಲ್ವರು ಪತ್ನಿಯರಿದ್ದಾರೆ. ಫಿರೋಜ್ ಆಲಂ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ನನ್ನನ್ನು ಮನೆಯಿಂದ ಆಚೆ ಹಾಕಿದ್ದಾನೆ ಎಂದು ಹೆಮ್ರೋಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಸ್ಲಿಮೇತರ ಮಹಿಳೆಯರನ್ನು ಮತಾಂತರ ಮಾಡುವುದೇ ನನ್ನ ಪತಿಯ ಕೆಲಸವಾಗಿತ್ತು. ಈವರೆಗೆ ಸುಮಾರು ಹನ್ನೆರಡು ಮಹಿಳೆಯರನ್ನು ಮತಾಂತರಗೊಳಿಸಿದ್ದಾನೆ. ನನ್ನ ಧರ್ಮವನ್ನು ಬದಲಿಸಲು ಪದೇಪದೆ ಒತ್ತಡ ಹೇರುತ್ತಿದ್ದ. ಫಿರೋಜ್ ಮತ್ತು ಆತನ ಕುಟುಂಬದ ಸದಸ್ಯರು ನನ್ನ ಮೇಲೆ ಹಲ್ಲೆ ಮಾಡಿ, ಮನೆಯಿಂದ ಹೊರ ಹಾಕಿದ್ದಾರೆ ಎಂದು ಹೆಮ್ರೋಮ್ ದೂರಿದ್ದಾರೆ.
ಹೆಮ್ರೋಮ್ ಅವರು ಫಿರೋಜ್ ಆಲಂ ವಿರುದ್ಧ ಮಾತ್ರವಲ್ಲದೆ, ಆತನ ಸಹೋದರಿಯರಾದ ಶಹನಾಜ್ ಖಾತೂನ್, ನಿಖತ್ ಪರ್ವೀನ್ ಮತ್ತು ರಹ್ನುಮಾ ಖಾತೂನ್ ವಿರುದ್ಧವೂ ದೂರು ದಾಖಲಿಸಿದ್ದಾರೆ. ನಾನೀಗ ನ್ಯಾಯವನ್ನು ಹುಡುಕುತ್ತಿದ್ದೇನೆ ಮತ್ತು ಬೇರೆ ಯಾವುದೇ ಮಹಿಳೆಯರಿಗೂ ಈ ರೀತಿಯ ಅನ್ಯಾಯ ಆಗಬಾರದು ಎಂದು ನಾನು ಬಯಸಿದ್ದೇನೆ ಎಂದು ಹೆಮ್ರೋಮ್ ಹೇಳಿದ್ದಾರೆ. (ಏಜೆನ್ಸೀಸ್)