nithyananda | ಸ್ವಯಂ ಘೋಷಿತ ದೇವ ಮಾನವ ಎಂದು ಕರೆಸಿಕೊಳ್ಳುವ ನಿತ್ಯಾನಂದಸ್ವಾಮಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಒಂದೊಂದು ವಿವಾದಗಳು ಜನರಲ್ಲಿ ಚಿರಪರಿಚಿತವಾಗಿ ಉಳಿದಿವೆ. ಹಲವಾರು ಆಶ್ರಮಗಳು ಮತ್ತು ಆಧ್ಯಾತ್ಮಿಕ ಪ್ರವಚನಗಳಿಗೆ ಹೆಸರುವಾಸಿಯಾಗಿದ್ದ ಅವರು, ನಿರಂತರ ವಿವಾದಗಳಲ್ಲಿ ಸಿಲುಕಿಕೊಂಡರು. ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, ಕೈಲಾಸ ಎಂಬ ಹೊಸ ದೇಶವನ್ನೇ ಸೃಷ್ಟಿಸಿದರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆ ಅಲ್ಲಿಗೆ ಬಂದು ನೆಲೆಸುವಂತೆ ಹಿಂದೂಗಳಿಗೆ ಆತ ಕರೆಕೊಟ್ಟಿದ್ದನ್ನ ನೀವು ನೋಡಿದ್ದೀರಿ. ವಿವಾದಾತ್ಮಕ ಹಾಗೂ ಆಧ್ಯಾತ್ಮಿಕ ನಾಯಕ ನಿತ್ಯಾನಂದ ಅವರ ಬಗ್ಗೆ ಆಸಕ್ತಿದಾಯಕ ಅಪರಿಚಿತ ಸಂಗತಿಗಳ ಬಗ್ಗೆ ತಿಳಿಯೋಣ.
ನಿತ್ಯಾನಂದ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಜನಸಿದರು. ಮೊದಲಿಗೆ ಇವರ ಹೆಸರನ್ನು ಅರುಣಾಚಲಂ ರಾಜಶೇಖರನ್ ಎಂದು ನಾಮಕಾರಣ ಮಾಡಲಾಗಿತ್ತು. ಅವರು ತಮ್ಮ 22ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಪಡೆದಿರುವುದಾಗಿ ಹೇಳಿದ್ದಾರೆ. ಅರುಣಾಚಲಂ ರಾಜಶೇಖರನ್ ಎಂಬ ಹೆಸರನ್ನು ನಂತರ "ನಿತ್ಯಾನಂದ" ಎಂಬುದಾಗಿ ಮಹಾವತಾರ್ ಬಾಬಾಜಿ ಅವರು ಬದಲಾಯಿಸಿದರು ಎಂಬುದಾಗಿ ಹೇಳಿಕೊಂಡಿದ್ದಾರೆ.
ನಿತ್ಯಾನಂದ 'ಕೈಲಾಸ' ಎಂಬ ಸ್ವಯಂ ಘೋಷಿತ ರಾಷ್ಟ್ರವನ್ನು ಸ್ಥಾಪನೆ ಮಾಡಿಕೊಂಡಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇದನ್ನು ಅವರು ತಮ್ಮ ಆಧ್ಯಾತ್ಮಿಕ ಚಿಂತಕರಿಗೆ ಸ್ವರ್ಗ ಎಂಬುದಾಗಿ ಬಣ್ಣಿಸಿದ್ದಾರೆ. ಈ ಮೈಕ್ರೋನೇಷನ್ ತನ್ನದೇ ಆದ ಧ್ವಜ, ಪಾಸ್‌ಪೋರ್ಟ್ ಮತ್ತು ಕರೆನ್ಸಿಯನ್ನು ಹೊಂದಿದೆ. ಕೈಲಾಸದ ಪಾಸ್ಪೋರ್ಟ್ನ ಎರಡು ಮಾದರಿಗಳಿದ್ದು, ಒಂದು ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದಾಗಿದೆ. ದೇಶದ ಧ್ವಜವು ಮೆರೂನ್ ಬಣ್ಣದ್ದಾಗಿದೆ. ಇದರಲ್ಲಿ ಎರಡು ಲಾಂಚನಗಳಿದ್ದು, ಒಂದು ನಿತ್ಯಾನಂದ ಹಾಗೂ ಇನ್ನೊಂದು ನಂದಿಯ ಚಿತ್ರವಾಗಿದೆ. ನಿತ್ಯಾನಂದ ಸಚಿವ ಸಂಪುಟವನ್ನು ಸಹ ರಚಿಸಿದ್ದು, 'ಮಾ' ಎಂಬ ಹೆಸರಿನ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಅಲ್ಲದೆ ಈ ದೇಶದಲ್ಲಿ ನಿತ್ಯಾನಂದ ಪ್ರತಿ ದಿನ ಸಚಿವ ಸಂಪುಟ ಸಭೆ ನಡೆಸುತ್ತಾರೆ ಎಂದು ಈ ಹಿಂದೆ ಮೂಲಗಳಿಂದ ತಿಳಿದು ಬಂದಿತ್ತು.
ನಿತ್ಯಾನಂದ ಅವರ ಸಂಸ್ಥೆಯಾದ ನಿತ್ಯಾನಂದ ಧ್ಯಾನಪೀಠಂ ಎಂಬ ಸಂಸ್ಥೆಗೆ ಎರಡು ಗಿನ್ನಿಸ್ ದಾಖಲೆ ದೊರೆತಿದೆ. ಅತಿದೊಡ್ಡ ಯೋಗ ತರಗತಿ ಮತ್ತು ಅತಿದೊಡ್ಡ ಮಲ್ಲಕಂಬ ತರಬೇತಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿದ್ದೀರಾ? ಇದರಿಂದ ನಿಮಗಾಗುವ ಪ್ರಯೋಜನವೇನು ಗೊತ್ತಾ; Hsrp
ನಿತ್ಯಾನಂದ ಅವರು ಲೈಂಗಿಕ, ಅಪಹರಣ ಮತ್ತು ವಂಚನೆ ಆರೋಪಗಳನ್ನು ಒಳಗೊಂಡಂತೆ ಹಲವಾರು ಆರೋಪಗಳನ್ನು ಎದುರಿಸಿದ್ದಾರೆ. 2019ರಲ್ಲಿ ಅವರು ಭಾರತದಿಂದ ಪಲಾಯನ ಮಾಡಿದರು. ಅಂದಿನಿಂದ ಇಲ್ಲಿಯವರೆಗೆ ಅವರು ತಲೆಮರೆಸಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಅವರ ವಿರುದ್ಧ ಹಲವಾರು ಜಾಮೀನು ರಹಿತ ವಾರಂಟ್‌ಗಳನ್ನು ನೀಡಲಾಗಿದೆ. ನಿತ್ಯಾನಂದ ಅವರು ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ ಜನರ ಟೀಕೆಗೆ ಗುರಿಯಾಗಿದ್ದಾರೆ. ಇದರ ಹೊರತಾಗಿಯೂ ಅವರು ಇನ್ನೂ ತಮಗೆ ಬೆಂಬಲ ನೀಡುವ ಅನೇಕ ನಿಷ್ಠಾವಂತ ಅನುಯಾಯಿಗಳನ್ನು ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ ನಿತ್ಯಾನಂದ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಈ ವದಂತಿಗಳನ್ನು ದೂರ ಮಾಡಲು ವೀಡಿಯೊ ಮೂಲಕ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಇದೀಗ ಅವರು ಮತ್ತೆ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ವಿವಿಧ ಮೊಕದ್ದಮೆಗಳಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಈ ರೀತಿ ಸುಳ್ಳು ಮಾಹಿತಿಯನ್ನು ಹರಡಿರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸಾವಿನ ಕುರಿತಾಗಿ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ಈಗ ಅವರ ಸಾವಿನ ಸುದ್ದಿ ನಿಜವೇ? ಅಥವಾ ಇನ್ನೊಂದು ಸುಳ್ಳು ಸುದ್ದಿಯೇ ಎಂದು ತಿಳಿಯಬೇಕಿದೆ.
(ಏಜೆನ್ಸೀಸ್)