ಬೆಂಗಳೂರು: ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಶುರುವಾಗಿ ನಾಲ್ಕು ದಿನಗಳಾಗಿದ್ದು, ಮೊದಲ ವಾರವೇ ಸ್ಫರ್ಧಿಗಳ ನಡುವಿನ ಕಿತ್ತಾಟದಿಂದಾಗಿ ಕಾರ್ಯಕ್ರಮ ಸಖತ್ ಸೌಂಡ್ ಮಾಡುತ್ತಿದೆ. ಈ ಬಾರಿ ಕಾರ್ಯಕ್ರಮವನ್ನು ಸ್ವರ್ಗ-ನರಕ (Hell-Heaven) ಎಂಬ ಥೀಮ್ ಅಡಿಯಲ್ಲಿ ವಿಂಗಡಿಸಲಾಗಿದ್ದು, ಒಂದಿಲ್ಲೊಂದು ಕಾರಣಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಆದರೆ, ಇದೀಗ ಬಿಗ್ಬಾಸ್ನಲ್ಲಿ ನೀಡಲಾಗಿದ್ದ ಟಾಸ್ಕ್ ವೇಳೆ ಸ್ಫರ್ಧಿಗಳಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ಮಾಡಲಾಗಿದೆ. ಸ್ವರ್ಗದಲ್ಲಿ ಇರುವವರಿಗೆ ಸಿಗುತ್ತಿರುವ ಸೌಲಭ್ಯ ನರದಲ್ಲಿ ಇರುವವರಿಗೆ ಸಿಗುತ್ತಿಲ್ಲ. ಈ ಕಾರಣಕ್ಕಾಗಿಯೇ ಸ್ಫರ್ಧಿಗಳ ನಡುವೆ ಕಿತ್ತಾಟವಾಗುತ್ತಿದೆ. ಇದೀಗ ಈ ಎರಡು ತಂಡಗಳಿಗೂ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದು, ಆಟ ಆಡುವಾಗ ಅವಘಡ ಸಂಭವಿಸಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ: ನನ್ನ ಪ್ರಕಾರ ಇದುವೇ Virat Kohliಯ ಕೊನೆಯ ಟೆಸ್ಟ್ ಸರಣಿ; ಕಿಂಗ್ ನಿವೃತ್ತಿ ಕುರಿತು ಭವಿಷ್ಯ ನುಡಿದ ಮಾಜಿ ಸ್ಟಾರ್ ಆಟಗಾರ
ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು ಎಂಬ ಅಡಿಬರಹದಲ್ಲಿ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಸ್ಫರ್ಧಿಗಳು ಚೆಂಡನ್ನು ಹಿಡಿದು ಓಡುವುದನ್ನು ನೋಡಬಹುದಾಗಿದೆ. ಈ ವೇಳೆ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಂ ಅವರು ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಇದಲ್ಲದೆ ಸ್ಫರ್ಧಿಗಳಾದ ಗೋಲ್ಡ್ ಸುರೇಶ್ ಹಾಗೂ ಮಾನಸಾಗೂ ಗಾಯವಾಗಿದ್ದು, ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಅವರು ನರಳಾಡುತ್ತಿರುವುದನ್ನು ನೋಡಬಹುದಾಗಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ತ್ರಿವಿಕಮ್ ಹಾಗೂ ಗೋಲ್ಡ್ ಸುರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಮನೆಗೆ ವಾಪಸ್ ಆಗಿದ್ದಾರೆ. ಉಳಿದಂತೆ ಯಾವ ಸ್ಪರ್ಧಿಗೆ ಪೆಟ್ಟಾಗಿದೆ ಎಂಬುದು ಇನ್ನಷ್ಟೇ ವರದಿಯಾಗಬೇಕಿದೆ. ಇನ್ನೂ ಕಾರ್ಯಕ್ರಮ ಆರಂಭವಾದ ಮೊದಲ ವಾರವೇ ಕಿತ್ತಾಟ ಶುರುವಾಗಿದ್ದು, ಟಾಸ್ಕ್ ವೇಳೆ ಅವಘಡಗಳು ನಡೆಯುತ್ತಿವೆ. ಜಗದೀಶ್ ಅವರು ಬೇರೆ ಸ್ಫರ್ಧಿಗಳ ವಿರುದ್ಧ ಕೂಗಾಡುತ್ತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಬಿಗ್ಬಾಸ್ಗೆ ಸವಾಲೆಸೆದಿದ್ದಾರೆ. ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್ ನಡೆಸಿಕೊಡುವ ಪಂಚಾಯಿತಿ ಸಂಚಿಕೆಗೆ ವೀಕ್ಷಕರು ಕಾಯುತ್ತಿದ್ದು, ಸ್ಫರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಎಂದು ಹೇಳಲಾಗಿದೆ.