ಸ್ಥಾಪಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಂಡು ಸೈಬರ್ ಕಾರ್ಯಾಚರಣೆಗಳನ್ನು ಸಶಕ್ತವಾಗಿ ನಿರ್ವಹಿಸಲು ಹಾಗೂ ಸೈಬರ್ ದಾಳಿಗಳಿಂದ ಸುರಕ್ಷಿತವಾಗಿರಿಸಿಕೊಳ್ಳಲು ಭಾರತೀಯ ಸೇನೆಯು ಹೊಸ ವಿಭಾಗವನ್ನು ರಚಿಸಲು ನಿರ್ಧರಿಸಿದೆ. ಸೈಬರ್ ದಾಳಿಗಳ ಸಾಧ್ಯತೆ ಹಿನ್ನೆಲೆಯಲ್ಲಿ, ಅದರಲ್ಲೂ ನೆರೆಯ ಚೀನಾ ಮತ್ತು ಪಾಕಿಸ್ತಾನದಿಂದ ಇಂತಹ ಆಕ್ರಮಣಗಳ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆಯು ಸೈಬರ್ ಸುರಕ್ಷತೆಗೆಆದ್ಯತೆ ನೀಡಲು ಮುಂದಾಗಿದೆ. ಇದೇ ತಿಂಗಳ 17ರಿಂದ 21ರವರೆಗೆ ನಡೆದ ಸೇನಾ ಕಮಾಂಡರ್ಗಳ ಸಮಾವೇಶದಲ್ಲಿ ಕಮಾಂಡ್ ಸೈಬರ್ ಆಪರೇಶನ್ಸ್ ಆಂಡ್ ಸಪೋರ್ಟ್ ವಿಂಗ್ (ಸಿಸಿಒಎಸ್ಡಬ್ಲ್ಯು) ಅನ್ನು ಶೀಘ್ರದಲ್ಲಿಯೇ ಆರಂಭಿಸಲು ನಿರ್ಧರಿಸಿರುವುದು ಸಮಯೋಚಿತ ಹಾಗೂ ಸಮಂಜಸ ಕ್ರಮವಾಗಿದೆ. ಭಾರತದ ವೈರಿಗಳು ಸೈಬರ್ ಯುದ್ಧದ ಸಾಮರ್ಥ್ಯಗಳನ್ನು ಈ ಹಿಂದಿಗಿಂತಲೂ ಹೆಚ್ಚು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೇನೆ ಹೇಳಿರುವುದು ಪರೋಕ್ಷವಾಗಿ ಚೀನಾ ಮತ್ತು ಪಾಕಿಸ್ತಾನದ ಕುತಂತ್ರಗಳನ್ನು ಸೂಚಿಸುತ್ತದೆ. ಈಗ ಪ್ರತಿಯೊಂದು ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ.
ಸೇನೆ ಕೂಡ ತನ್ನ ಕಾರ್ಯನಿರ್ವಹಣೆಯಲ್ಲಿ ಕಂಪ್ಯೂಟರ್, ಇಂಟರ್ನೆಟ್ ಸೇರಿದಂತೆ ಮಾಹಿತಿ ತಂತ್ರಜ್ಞಾನದ ಮೇಲೆ ಸಾಕಷ್ಟು ಅವಲಂಬಿತವಾಗಿದೆ. ಹೀಗಾಗಿ, ತನ್ನ ಕಂಪ್ಯೂಟರ್ ನೆಟ್ವರ್ಕ್ಗಳ ಸುರಕ್ಷತೆಯ ಮಹತ್ವವನ್ನು ಅರಿತುಕೊಂಡು ಸೇನೆಯು ಸಿಸಿಒಎಸ್ಡಬ್ಲ್ಯು ರಚನೆಗೆ ಮುಂದಾಗಿದೆ. ಆಧುನಿಕ ಜಗತ್ತಿನಲ್ಲಿ ಭೌತಿಕ ಯುದ್ಧ ಭೀತಿಗಿಂತಲೂ ಸೈಬರ್ ದಾಳಿಗಳು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಭೌತಿಕ ಯುದ್ಧಗಳು ಯಾವುದೋ ಒಂದು ಸಮಯ- ಸಂದರ್ಭದಲ್ಲಿ ನಡೆದರೆ, ಸೈಬರ್ ದಾಳಿಯ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಕಂಪ್ಯೂಟರ್ ನೆಟ್ವರ್ಕ್ಗಳಲ್ಲಿ ವೈರಸ್ಗಳನ್ನು ಹರಿಬಿಡುವ ಮೂಲಕ ಮಹತ್ವದ ಮಾಹಿತಿಗಳನ್ನು ಕದಿಯಲು, ಕಂಪ್ಯೂಟರ್ ವ್ಯವಸ್ಥೆ ಹಾನಿಗೊಳಿಸಲು ಸೈಬರ್ ದಾಳಿಗಳನ್ನು ಕೈಗೊಳ್ಳಲಾಗುತ್ತದೆ. ಸೈಬರ್ ದಾಳಿಯ ಮೂಲಕ ಆಕ್ರಮಣಕಾರರು ಕಂಪ್ಯೂಟರ್ ಸಿಸ್ಟಮ್ ನೆಟ್ವರ್ಕ್ ಅಥವಾ ಸಾಧನಕ್ಕೆ ಅನಧಿಕೃತ ಪ್ರವೇಶ ಪಡೆದು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗುತ್ತಾರೆ. ಸೈಬರ್ ದಾಳಿಗಳು
ವಿದ್ಯುತ್ ಸ್ಥಗಿತ, ಮಿಲಿಟರಿ ಉಪಕರಣಗಳ ವೈಫಲ್ಯ ಮತ್ತು ರಾಷ್ಟ್ರೀಯ ಭದ್ರತಾ ರಹಸ್ಯ ಮಾಹಿತಿ ಕಳ್ಳತನಕ್ಕೂ ಕಾರಣವಾಗಬಹುದಾಗಿದೆ. ಹೀಗಾಗಿ, ಸೈಬರ್ ದಾಳಿಗಳ ತಡೆಗೆ ನಿರಂತರ ಕಟ್ಟೆಚ್ಚರದ ವ್ಯವಸ್ಥೆ ಅತ್ಯಗತ್ಯವಾಗಿರುತ್ತದೆ. ಸೈಬರ್ ದಾಳಿಯ ಸಾಮರ್ಥ್ಯದಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದರೂ ಚೀನಾ ಕೂಡ ಈ ನಿಟ್ಟಿನಲ್ಲಿ ಸಾಮರ್ಥ್ಯವನ್ನು ವರ್ಧಿಸಿಕೊಂಡಿರುವುದು ಭಾರತಕ್ಕೆ ಆತಂಕಕಾರಿ ಸಂಗತಿಯಾಗಿದೆ. ಭಾರತದ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ- ಈ ಮೂರಕ್ಕೂ ಸಂಬಂಧಿಸಿದಂತೆ ಸೈಬರ್ ಭದ್ರತಾ ಬೆದರಿಕೆಗಳನ್ನು ನಿಭಾಯಿಸುವ ಕಾರ್ಯವನ್ನು ಡಿಫೆನ್ಸ್ ಸೈಬರ್ ಏಜೆನ್ಸಿ (ಡಿಸಿಎ) ನೋಡಿಕೊಳ್ಳುತ್ತದೆ. ಈಗ ಭೂಸೇನೆಯು ತನ್ನದೇ ಆದ ಪ್ರತ್ಯೇಕ ವಿಭಾಗ ಹೊಂದಲು ಮುಂದಾಗಿರುವುದು ಈ ನಿಟ್ಟಿನಲ್ಲಿ ಇನ್ನಷ್ಟು ಮುನ್ನೆಚ್ಚರಿಕೆಯ ಕ್ರಮವಾಗಿ ತೋರುತ್ತದೆ.