ನ್ಯೂಸ್

VIDEO| ಕೆಲವು ಮುಸ್ಲಿಮರು ಸತ್ತರೆ ಏನೂ ನಷ್ಟವಾಗುವುದಿಲ್ಲ; ಕಾಂಗ್ರೆಸ್​ ನಾಯಕನ ವಿವಾದಾತ್ಮಕ ಹೇಳಿಕೆ

ನವದೆಹಲಿ: ಕಳೆದ 10 ವರ್ಷಗಳಿಂದ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಹೆದರಿಸಲಾಗುತ್ತಿದ್ದು, 22 ಕೋಟಿ ಜನಸಂಖ್ಯೆ ಪೈಕಿ ಒಂದು ಅಥವಾ ಎರಡು ಕೋಟಿ ಜನ ಸತ್ತರೆ ಏನೂ ನಷ್ಟವಾಗುವುದಿಲ್ಲ ಎಂದು ಹೇಳುವ ಮೂಲಕ ಉತ್ತರಪ್ರದೇಶ, ಉತ್ತರಾಖಂಡ, ಮಿಜೋರಾಂನ ಮಾಜಿ ರಾಜ್ಯಪಾಲ, ಕಾಂಗ್ರೆಸ್​ ನಾಯಕ ಅಜೀಜ್​ ಖುರೇಷಿ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

ಕಾರ್ಯಕ್ರಮ ಒಂದನ್ನು ಉದ್ಧೇಶಿಸಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ನಾನು ವಿಷಾದ ವ್ಯಕ್ತಪಡಿಸುವುದಿಲ್ಲ. ಬೇಕಿದ್ದರೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಕಾಂಗ್ರೆಸ್​ ಹೈಕಮಾಂಡ್​ಗೆ ಸವಾಲೆಸೆದಿದ್ದಾರೆ.

ವೈರಲ್​ ವಿಡಿಯೋದಲ್ಲೇನಿದೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್​ ಪಕ್ಷದ ಕೆಲವು ನಾಯಕರು ಧಾರ್ಮಿಕ ಪ್ರವಾಸಗಳ ಬಗ್ಗೆ ಮಾತನಾಡುತ್ತ ತಾವೊಬ್ಬ ಹೆಮ್ಮೆಯ ಹಿಂದು ಎಂದು ಹೇಳಿಕೊಳ್ಳುತ್ತಾ ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಜನರು ಜೈ ಗಂಗಾ, ಜೈ ನರ್ಮದಾ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಜವಾಹರಲಾಲ್​ ನೆಹರೂ ಅವರ ಜಾತ್ಯಾತೀತ ಪರಿಕಲ್ಪನೆಯ ಕಾಂಗ್ರೆಸ್​ ಪಕ್ಷವನ್ನು ರಾಜಕೀಯಕ್ಕಾಗಿ ಬಲಿಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕಾಂಗ್ರೆಸ್​ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಮುದಾಯದವರನ್ನು ಗುಲಾಮರೆಂದುಕೊಂಡಿದ್ಧಾರೆ. ಆದರೆ,ಇವರೆಲ್ಲರೂ ಒಂದು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ನಾವು ಯಾರಿಗೂ ಗುಲಾಮರಲ್ಲ. ನೀವು ನಮಗೆ ಸೇನೆ, ನೌಕೆ ಅಥವಾ ಪೊಲೀಸ್​ ಇಲಾಖೆಯಲ್ಲಿ ಕೆಲಸ ಕೊಡಿಸಿದ್ದೀರಾ. ಯಾವ ಆಧಾರದ ಮೇಲೆ ಮುಸ್ಲಿಮರು ನಿಮಗೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ಧಾರೆ.

ದೇಶದ ಪ್ರಧಾನಿ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ತಮ್ಮ ಭಾಷಣದ ಮೂಲಕ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ತಮಗೆ ಅನ್ಯಾಯವಾದರೆ ಮುಸ್ಲಿಂ ಸಮುದಾಯದವರು ಸಿಡಿದೇಳದೆ ಬೇರೆ ಅವರಿಗೆ ಬೇರೆ ವಿಧಿಯಿಲ್ಲ. ಸಮುದಾಯವು ಇಂದು ಭಯದ ನೆರಳಿನಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಬುಲ್ಡೋಜರ್‌ಗಳು ಮತ್ತು ಎನ್‌ಕೌಂಟರ್‌ಗಳು ಮುಸ್ಲಿಮರ ಮೇಲೆ ಮಾತ್ರ ಯಾಕೆ ಪ್ರಯೋಗಿಸಲಾಗುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಜೀಜ್​ ಖುರೇಷಿ ವಾಗ್ದಾಳಿ ನಡೆಸಿದ್ಧಾರೆ.