ನ್ಯೂಸ್

'ಇನ್ಮುಂದೆ ಈ ಶೋಕಾಚರಣೆ ಬಿಜೆಪಿಗೆ ನಿರಂತರವಾಗಿರಲಿದೆ'; ಕಾಂಗ್ರೆಸ್ ಹೀಗೆ ಹೇಳಲು ಕಾರಣವೇನು?

ಮೋಹನ್​ ಶೆಟ್ಟಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಘೋಷಿಸಿದ ಗ್ಯಾರಂಟಿ ಯೋಜನೆಗಳು ಜಾರಿಗೆ ಬರುವ ಮುನ್ನವೇ ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ನಡುವೆ ಟ್ವೀಟ್ ಸಮರ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಿದೆ.

ಬಿಜೆಪಿ ಟ್ವೀಟ್(Tweet) ಮಾಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ತನ್ನ ಟ್ವೀಟ್​ ಅನ್ನು ಅಸ್ತ್ರದಂತೆ ಪ್ರಯೋಗ ಮಾಡುತ್ತಿರುವುದು ಈ ಟ್ವೀಟ್ ಸಮರಕ್ಕೆ ಮುಖ್ಯ ಕಾರಣವಾಗಿದೆ! ಬಿಜೆಪಿ ಮತ್ತು ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಚುನಾವಣೆ ನಡೆದು ಒಂದು ತಿಂಗಳ ನಂತರವೂ ಬಿಜೆಪಿ ಸೋಲಿನ ಶಾಕ್ ನಿಂದ ಹೊರಬಂದಿಲ್ಲ, ಒಂದು ವರ್ಷ ಕಳೆದರೂ ಹೊರಬರುವುದಿಲ್ಲ ಆ ಮಟ್ಟಿಗೆ ಶಾಕ್ ಹೊಡೆದಿದೆ!" ಎಂದು ಹೇಳಿದೆ.

"ನಂತರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಹುದೊಡ್ಡ ಶಾಕ್ ಹೊಡೆಯಲಿದೆ. ಇದರ ಮುನ್ಸೂಚನೆ ಅರಿತೇ ಪ್ರತಾಪ್ ಸಿಂಹ(Prathap Simha) ಅವರ ರೋಧನೆ ಶುರುವಾಗಿದೆ. ಈ ಶೋಕಾಚರಣೆ ಇನ್ಮುಂದೆ ಬಿಜೆಪಿಗೆ ನಿರಂತರವಾಗಿರಲಿದೆ" ಎಂದು ಟ್ವೀಟ್ ಮಾಡಿದೆ.

ಏಟಿಗೆ ಎದಿರೇಟು ಎಂಬಂತೆ ಕಾಂಗ್ರೆಸ್ ಟ್ವೀಟ್​ಗೆ ಬಿಜೆಪಿ ಟ್ವೀಟ್ ಮಾಡಿದ್ದು, "ಮಾನ್ಯ ಸಿದ್ದರಾಮಯ್ಯನವರೇ, ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದ್ದೀರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ! ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ. ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ" ಎಂದು ಟ್ವೀಟ್​ನಲ್ಲಿ ತಿಳಿಸಿದೆ.

"ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ ‘ಕೈ’ ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ ‘ಗ್ಯಾರಂಟಿ’ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ" ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.