ನ್ಯೂಸ್

ಪೊಲೀಸ್ ಇಲಾಖೆಯನ್ನು ಹಸಿರೀಕರಣ ಮಾಡಲ್ಲ, ಸಂವಿಧಾನೀಕರಣ ಮಾಡುತ್ತೇವೆ; ಯತ್ನಾಳ್ ಹೇಳಿಕೆಗೆ ಟಾಂಗ್ ಕೊಟ್ಟ ಕಾಂಗ್ರೆಸ್

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸಿರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಕೇಸರಿ ಈ ಧರ್ಮದ, ದೇಶದ ಸಂಕೇತವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಯತ್ನಾಳ್ ಮಾತಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಪೊಲೀಸ್ ಇಲಾಖೆಯನ್ನು ಹಸಿರೀಕರಣ ಮಾಡುವುದಿಲ್ಲ. ಕೇಸರೀಕರಣವೂ ಮಾಡುವುದಿಲ್ಲ. ಬದಲಾಗಿ ಸಂವಿಧಾನೀಕರಣ ಮಾಡುತ್ತೇವೆ ಎಂದು ಹೇಳಿದೆ.

ಇನ್ನು ಮುಂದೆ ಸಂಸ್ಕಾರವಿಲ್ಲದ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಹಿತಕ್ಕಾಗಿ ನಮ್ಮ ಸಲಹೆ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ. ಹಾಗೆಯೇ ನಿಮ್ಮ ಪಕ್ಷದಲ್ಲಿ ಚುನಾವಣಾ ಸೋಲಿನ ಹೊಣೆ ಹೊರುವವರು ಯಾರೆಂಬುದನ್ನು ಮೊದಲು ಹೇಳಿ ಎಂದು ಕಾಂಗ್ರೆಸ್ ಯತ್ನಾಳ್ ಅವರನ್ನು ಪ್ರಶ್ನಿಸಿದೆ.

ಏನಿದು ಆರೋಪ-ಪ್ರತ್ಯಾರೋಪ?

ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡುವುದಿಲ್ಲ. ದೇಶದ ಬಗ್ಗೆ ಗೌರವ ಇದ್ದರೆ ರಾಷ್ಟ್ರ ಧ್ವಜ ಹಾಕಿಕೊಂಡು ಕೆಲಸ ಮಾಡಬೇಕಿತ್ತು. ನಮ್ಮ ಸರ್ಕಾರ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದು ಮಂಗಳವಾರ ವಿಧಾನಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದರು.

ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರ? ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ. ಪೊಲೀಸರು ಕೇಸರಿಶಾಲು ಹಾಕ್ಕೊಂಡ್ರೆ ತಪ್ಪೇನಿದೆ? ಎಂದು ಕಾಂಗ್ರೆಸ್​​ಗೆ ಪ್ರಶ್ನೆ ಮಾಡಿದ್ದರು.

ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡಗಳು ಮುಗಿಯುತ್ತವೆ. 2024ಕ್ಕೆ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿ.ಕೆ ಶಿವಕುಮಾರ್​ಗಳು ಬಂದ್ರು ಏನು ಆಗೋದಿಲ್ಲ ಎಂದು ಹೇಳಿದ್ದರು.