ನ್ಯೂಸ್

ಬಳಸಿ ಬಿಸಾಡುವುದಕ್ಕೆ ಬಿಎಸ್​ವೈ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ?: ರಾಜ್ಯ ಕಾಂಗ್ರೆಸ್​​

ಮೋಹನ್​ ಶೆಟ್ಟಿ

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆಯನ್ನು ಲೇವಡಿ ಮಾಡಿದ ರಾಜ್ಯ ಕಾಂಗ್ರೆಸ್​, ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಬಿ.ಎಸ್. ಯಡಿಯೂರಪ್ಪ​ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ? ಎಂದು ಟ್ವೀಟ್​ ಮಾಡಿ ಪ್ರಶ್ನಿಸಿದೆ.

ರಾಜ್ಯ ಕಾಂಗ್ರೆಸ್​ ಮಾಡಿರುವ ಟ್ವೀಟ್​​ ಹೀಗಿದೆ, "ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ, ಪದಚ್ಯುತಿಗೊಳಿಸಿ ನಂತರ ವಯಸ್ಸಿನ ಕಾರಣ ನೀಡಿದ ಬಿಜೆಪಿ ಈಗ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರೀಡಂ ಪಾರ್ಕಿನಲ್ಲಿ ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು. ಅಧಿಕಾರ ನಡೆಸಲು ಮಾತ್ರ ಅವರಿಗೆ ವಯಸ್ಸಾಗಿತ್ತೇ, ಈಗ ಅವರಿಗೆ ಹದಿನೆಂಟರ ಹರೆಯವೇ? ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಬಿಎಸ್​​ವೈ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದೆಯೇ ಬಿಜೆಪಿ?" ಎಂದು ಟ್ವೀಟ್​ ಮಾಡಿದೆ.

"ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ, ರಾಜಕೀಯದಿಂದ ದೂರ ತಳ್ಳಿದ್ದ ಬಿ.ಎಸ್​. ಯಡಿಯೂರಪ್ಪ ಅವರನ್ನೇ ಮತ್ತೆ ಆಶ್ರಯಿಸಿದ್ದು ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ. ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿ ಸಂಸ್ಕೃತಿ" ಎಂದು ಟ್ವೀಟ್​ ಮೂಲಕ ಟೀಕಿಸಿದೆ.