ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿ ಉದ್ಯೋಗಕ್ಕೆ ಕೊಕ್ | ಸರ್ಕಾರ ಬದಲಾದಾಗ ನಿಯಮದಂತೆ ತಾತ್ಕಾಲಿಕ ನೇಮಕಾತಿ ರದ್ದಾಗುತ್ತವೆ; ಕಾಂಗ್ರೆಸ್ ಸ್ಪಷ್ಟನೆ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ಕುಮಾರಿ ಎಂ. ಅವರಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಸೆ. 29ರಂದು ಆದೇಶ ಹೊರಡಿಸಿದ್ದರು. ಇದೀಗ ಸರ್ಕಾರ ಬದಲಾಗಿದ್ದು, ನೂತನ ಕಾಂಗ್ರೆಸ್​ ಸರ್ಕಾರ ನೆಟ್ಟಾರ್ ಪತ್ನಿಗೆ ಕೆಲಸದಿಂದ‌ ಕೊಕ್ ನೀಡಿದೆ. 

ಈ ಬಗ್ಗೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರುವ ಬಿಜೆಪಿಗೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಆಸಕ್ತಿ ಮತ್ತು ಸಮಯ ಇರಲು ಸಾಧ್ಯವೇ? ವ್ಯಂಗ್ಯವಾಡಿದೆ. ಜತೆಗೆ ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತವೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಬದುಕಿಗೆ ಶಾಶ್ವತ ದಾರಿ ತೋರಿಸದೆ ಇಂತಹ ಪೇಪರ್ ಚಾಕ್ಲೆಟ್ ನೀಡುವ ಮೂಲಕ ಬಿಜೆಪಿ ಪ್ರವೀಣ್ ನೆಟ್ಟಾರು ಪತ್ನಿಗೆ ದ್ರೋಹವೆಸಗಿದೆ ಎಂದು ಕಾಂಗ್ರೆಸ್ ಬಿಜೆಪಿ ಆರೋಪಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಆದೇಶ ಹಿಂಪಡೆಯಲು ಬಿಜೆಪಿ ಆಗ್ರಹ

ಕಾಂಗ್ರೆಸ್ ಪಕ್ಷವೇ ಸಾಕಿ‌ ಬೆಳೆಸಿದ ಪಿಎಫ್ಐ ಎಂಬ ಭಯೋತ್ಪಾದಕ ಸಂಘಟನೆಯ ಕೋಮು ದ್ವೇಷಕ್ಕೆ ಒಳಪಟ್ಟು, ಪಿಎಫ್‌ಐ ಗೂಂಡಾಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಧರ್ಮಪತ್ನಿಗೆ ಜೀವನ ನಿರ್ವಹಣೆಗಾಗಿ ಅನುಕಂಪದ ಆಧಾರದಲ್ಲಿ ನಮ್ಮ ಸರ್ಕಾರ ಮಂಗಳೂರಿನ ಡಿ.ಸಿ. ಕಚೇರಿಯಲ್ಲಿ ಉದ್ಯೋಗ ಕಲ್ಪಿಸಿತ್ತು. ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ದ್ವೇಷದ ರಾಜಕೀಯವನ್ನು ಮುಂದುವರೆಸಿರುವುದು ಖಂಡನೀಯ. ಈ ಕೂಡಲೇ ಸರ್ಕಾರ ಉದ್ಯೋಗದಿಂದ ವಜಾಮಾಡುವ ಅಮಾನವೀಯ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬಿಜೆಪಿ ಟ್ವೀಟ್ ಮಾಡಿದೆ. ಪಿಎಫ್ಐ ಕೈಗೊಂಬೆಯಂತೆ ಸಿದ್ದರಾಮಯ್ಯರವರ ಸರಕಾರ ಕುಣಿಯುತ್ತಿರುವುದು ರಾಜ್ಯದ ದುರಂತ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಘಟನೆ ಹಿನ್ನೆಲೆ?

2022ರ ಜುಲೈ 26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್​ ನೆಟ್ಟಾರ್​ರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಇವರ ಹತ್ಯೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಪ್ರವೀಣ್​ ಕುಟುಂಬದ ಬೆನ್ನಿಗೆ ನಾವಿದ್ದೇವೆ ಎಂದು ಸಿಎಂ ಆ ವೇಳೆ ಅಭಯ ನೀಡಿದ್ದರು. ಅದರಂತೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ನೆಟ್ಟಾರ್​ ಪತ್ನಿಗೆ ಸರ್ಕಾರಿ ಉದ್ಯೋಗ ಘೋಷಣೆ ಮಾಡಿದ್ದರು. ಬಳಿಕ ಆದೇಶ ಹೊರಡಿಸಿ ಮಾತು ಉಳಿಸಿಕೊಂಡರು.