ನವದೆಹಲಿ: ಕರ್ನಾಟಕ ಚುನಾವಣೆ ಕಾವು ಏರುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಭಾರಿ ಚಟುವಟಿಕೆಗಳು ನಡೆಯಲಾರಂಭಿಸಿವೆ. ಅದರಲ್ಲೂ ಕಾಂಗ್ರೆಸ್ನ ಘಟಾನುಘಟಿ ನಾಯಕರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಮೋದಿ-ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಅಭ್ಯರ್ಥಿಗಳು, ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಲು ನೂರಾರು ಐಟಿ ಮತ್ತು ಇಡಿ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ ಎಂದು ನಮಗೆ ಮಾಹಿತಿ ಇದೆ ಎಂದ ಸುರ್ಜೆವಾಲ, ಪ್ರಧಾನಿ ಮೋದಿ ತಮ್ಮ ಬತ್ತಳಿಕೆಯಲ್ಲಿರುವ ಅಂತಿಮ ಅಸ್ತ್ರಗಳನ್ನು ಬಳಸಲು ನಿರ್ಧರಿಸಿದ್ದು, ಅವು ಸಹ ದಯನೀಯವಾಗಿ ವಿಫಲವಾಗುತ್ತವೆ ಎಂದಿದ್ದಾರೆ.
ಪ್ರಧಾನಿ ಮೋದಿ ಮತ್ತು ಅವರ ಇಡಿ ಮತ್ತು ಐಟಿಯ ನಕಲಿ, ಮೋಸದ ಮತ್ತು ಕಲ್ಪಿತ ದಾಳಿಗಳು ಅಧಿಕಾರಕ್ಕೆ ಬರುವ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವುದಿಲ್ಲ ಎಂದು ತಿಳಿದಿರಬೇಕು ಎಂದು ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದೆ, ಬಿಜೆಪಿ ತನ್ನ ಅಸ್ತ್ರ ಸಿದ್ಧಪಡಿಸಿಕೊಂಡಿದೆ. ಐಟಿ-ಇಡಿ ಮೂಲಕ ಬೆದರಿಸಲು ಮುಂದಾಗಿದ್ದಾರೆ. ನಮಗೂ ಕಾಲ ಬರಲಿದೆ, ಮುಂದೆ ನಾವೂ ಸುಮ್ಮನೆ ಇರುವುದಿಲ್ಲ. ಐಟಿ-ಇಡಿ ದುರ್ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ ಎಂದಿದ್ದಾರೆ. ಮಾತ್ರವಲ್ಲ, ಬಿಜೆಪಿಯ ನಿಲುವಿನ ವಿರುದ್ಧ ಕಾಂಗ್ರೆಸ್ ಹೋರಾಡಲಿದೆ ಎಂದೂ ಹೇಳಿದ್ದಾರೆ.