ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕ ದ್ರವ್ಯ ಜಾಲದ ಆಯಾಮದ ತನಿಖೆ ನಡೆಸುತ್ತಿರುವ ಮಾದಕದ್ರವ್ಯ ನಿಯಂತ್ರಣ ದಳ (ಎನ್ಸಿಬಿ) ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಹೋದರನನ್ನು ಬಂಧಿಸಿದ್ದು, ಇದನ್ನು ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ ಖಂಡಿಸಿದ್ದಾರೆ.
ಭಾರತಕ್ಕೆ ಅಭಿನಂದನೆಗಳು, ನೀವು ನನ್ನ ಮಗನನ್ನು ಬಂಧಿಸಿದ್ದೀರಿ, ಮುಂದೆ ನನ್ನ ಮಗಳನ್ನು ಬಂಧಿಸುತ್ತೀರಿ ಎಂಬುದು ಖಾತ್ರಿಯಾಗಿದೆ ಮತ್ತು ಅದರ ನಂತರ ಯಾರು ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಇಂದ್ರಜಿತ್ ಮಗನ ಬಂಧನವನ್ನು ಟೀಕಿಸಿದ್ದಾರೆ.
ಮಧ್ಯಮ ವರ್ಗದ ಕುಟುಂಬವನ್ನು ನೀವು ಪರಿಣಾಮಕಾರಿಯಾಗಿ ನಿರ್ನಾಮ ಮಾಡಿದ್ದೀರಿ. ಆದರೆ ಸಹಜವಾಗಿ, ನ್ಯಾಯದ ಸಲುವಾಗಿ ಎಲ್ಲವೂ ಸಮರ್ಥನೆಯಾಗಿದೆ. ಜೈಹಿಂದ್ ಎನ್ನವ ಮೂಲಕ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿರುವ ರಿಯಾ ತಂದೆ ಇಂದ್ರಜಿತ್ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ.
ಅಂದಹಾಗೆ ಇಂದ್ರಜಿತ್ ಅವರ ಮಗ ಶೋವಿಕ್ ಚಕ್ರವರ್ತಿಯನ್ನು ಎನ್ಸಿಬಿ ಶುಕ್ರವಾರ ಬಂಧಿಸಿದೆ. ಶೋವಿಕ್ ಒಟ್ಟಿಗೆ ಸುಶಾಂತ್ ಸಿಂಗ್ ಹೌಸ್ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂಡನನ್ನು ಬಂಧಿಸಲಾಗಿದ್ದು, ಇಬ್ಬರ ವಿರುದ್ಧ ಮಾದಕ ದ್ರವ್ಯ ವಿರೋಧಿ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ಬುಧವಾರದವರೆಗೂ ಇಬ್ಬರನ್ನು ಎನ್ಸಿಬಿ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.
ಶೋವಿಕ್ ಬಳಿ ಇದುವರೆಗೂ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಮತ್ತು ಎನ್‌ಸಿಬಿಯು ಅಬ್ಬಾಸ್ ಲಖಾನಿ ಮತ್ತು ಕರಣ್ ಅರೋರಾ ಎಂಬ ಇಬ್ಬರು ವ್ಯಕ್ತಿಗಳಿಂದ 59 ಗ್ರಾಂ ಕ್ಯುರೇಟೆಡ್ ಗಾಂಜಾವನ್ನು ಪತ್ತೆಹಚ್ಚಿದ್ದು, ಸುಶಾಂತ್ ಸಿಂಗ್‌ಗೆ ಹತ್ತಿರ ಇರುವವರೊಂದಿಗೆ ಅವರು ಹೊಂದಿದ್ದ ಸಂಪರ್ಕದ ಬಗ್ಗೆ ಎನ್ಸಿಬಿಗೆ ತಿಳಿದುಬಂದಿದೆ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ರಿಯಾಗೂ ಎನ್ಸಿಬಿ ಸಮನ್ಸ್ ನೀಡುವ ಸಾಧ್ಯತೆಯು ಇದೆ. (ಏಜೆನ್ಸೀಸ್)