More

    ಲಕ್ಷ ಅಂಗಡಿಗಳು ಬಂದ್: ನಿರುದ್ಯೋಗ ಶೇ.228.2 ಹೆಚ್ಚಳ, ಕೈಹಿಡಿಯುವುದೇ ಸರ್ಕಾರ?

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದಲ್ಲಿ ಕರೊನಾ ಸಂಕಷ್ಟದ ಸರಣಿ ಮುಂದುವರಿದಿರುವಂತೆಯೇ ಆರ್ಥಿಕ ಹೊರೆ ತಾಳಲಾರದೆ ಲಕ್ಷಕ್ಕೂ ಅಧಿಕ ಅಂಗಡಿ ಮುಂಗಟ್ಟಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಇದರ ಜತೆಗೆ, ಕರೊನಾದ ಒಟ್ಟಾರೆ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಶೇ.228.2 ಹೆಚ್ಚಳವಾಗಿದೆ.

    ವಿವಿಧ ವಾಣಿಜ್ಯೋದ್ಯಮ ಸಂಘಟನೆಗಳು ನಡೆಸಿರುವ ಆಂತರಿಕ ಸಮೀಕ್ಷೆಗಳು ರಿಟೇಲ್ ವಲಯಕ್ಕೆ ತಟ್ಟಿರುವ ಸಮಸ್ಯೆಗಳ ಭೀಕರತೆ ಅನಾವರಣಗೊಳಿಸಿವೆ. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗಿಂತ ರಿಟೇಲ್ ವಲಯಕ್ಕೆ ತಟ್ಟಿರುವ ಆಘಾತ ಹೆಚ್ಚಾಗಿದೆ. ಯಾವ ಪ್ರದೇಶಕ್ಕೆ ಹೋದರೂ ಅಂಗಡಿಗಳು ಮುಚ್ಚಿರುವುದು ಕಂಡುಬರುತ್ತದೆ.

    ಪೂರೈಕೆ ಸರಪಳಿ ಸ್ಥಗಿತ: ಅಂಗಡಿಗಳು ನಡೆಯಬೇಕೆಂದರೆ ಉತ್ಪಾದನೆಯಾಗುವ ವಸ್ತುಗಳ ಸರಬರಾಜು ಇರಬೇಕು. ಒಂದೆಡೆ ಕಾರ್ವಿುಕರ ಕೊರತೆಯಿಂದ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಸಣ್ಣ ಪ್ರಮಾಣದ ಉತ್ಪಾದನೆಯಾದರೂ ಸಾಗಾಟಕ್ಕೆ ಸಾರಿಗೆ ಉದ್ಯಮ ಚೇತರಿಸಿಕೊಂಡಿಲ್ಲ.

    ಬಾಗಿಲು ಮುಚ್ಚುತ್ತಿರುವ ಅಂಗಡಿಗಳು ಒಂದೆಡೆಯಾದರೆ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದವರ ಪೈಕಿ ವ್ಯಾಪಾರ ಸ್ಥಗಿತಗೊಳಿಸಿರುವವರ ಲೆಕ್ಕ ಸಿಗುತ್ತಿಲ್ಲ. ಏಕೆಂದರೆ ಇವರೆಲ್ಲ ಅಸಂಘಟಿತ ವಲಯದವರಾಗಿದ್ದಾರೆ. ಅಂದಾಜಿನ ಪ್ರಕಾರ ಐದರಿಂದ ಆರು ಲಕ್ಷ ಬೀದಿ ವ್ಯಾಪಾರಿಗಳು ವಹಿವಾಟು ಮುಚ್ಚಿರಬಹುದೆನ್ನಲಾಗಿದೆ. ಎಳನೀರು, ಊಟ, ಹಣ್ಣು ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಆಗಿದೆ.

    ನೌಕರರು ಬೀದಿಗೆ: ಅಂಗಡಿ ಮುಂಗಟ್ಟುಗಳು ಮುಚ್ಚಿರು ವುದು ಒಂದೆಡೆಯಾದರೆ, ನಿರುದ್ಯೋಗ ಪ್ರಮಾಣ ಶೇ. 228.2 ಹೆಚ್ಚಳವಾಗಿರುವುದಾಗಿ ವಾಣಿಜೋದ್ಯಮ ಸಂಘಟನೆಯೊಂದರ ಅಧ್ಯಯನ ವರದಿ ಹೇಳುತ್ತದೆ. ಪ್ರತಿ ಅಂಗಡಿಯಲ್ಲಿ ಸರಾಸರಿ ಇಬ್ಬರು- ಮೂವರು ಕೆಲಸ ಮಾಡುತ್ತಿರುತ್ತಾರೆ. ಬೀದಿ ಬದಿ ವ್ಯಾಪಾರ ಮಾಡುವವರ ಸಂಖ್ಯೆಯನ್ನು ಲೆಕ್ಕಕ್ಕೆ ಪರಿಗಣಿಸಿದರೆ ನಿರುದ್ಯೋಗದ ಪ್ರಮಾಣ ಇಷ್ಟು ಹೆಚ್ಚಳವಾಗಿದೆ ಎಂಬುದು ಅಧ್ಯಯನ ವರದಿ ಬೊಟ್ಟುಮಾಡಿದೆ.

    ಒಂದು ಲಕ್ಷ ಅಂಗಡಿಗಳಿಂದ ಸುಮಾರು 3 ಲಕ್ಷಕ್ಕೂ ಅಧಿಕ ನಿರುದ್ಯೋಗ ಸೃಷ್ಟಿಯಾಗಿದೆ. ಅಂಗಡಿ ತೆರೆಯುವುದಕ್ಕೆ ಮುನ್ನ ಕೊಟ್ಟಿದ್ದ ಮುಂಗಡ ಹಣ ಮುಗಿದ ಕೂಡಲೇ ಅಂಗಡಿಗಳನ್ನು ಮುಚ್ಚಿದ್ದಾರೆ. ಬೆಂಗಳೂರು ನಗರದಲ್ಲೇ 4 ಲಕ್ಷಕ್ಕಿಂತ ಹೆಚ್ಚಿನ ಶಾಪ್​ಗಳಿದ್ದವು. ಸದ್ಯ ಅವುಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮುಚ್ಚಿವೆ. ಬ್ರಿಗೇಡ್ ರಸ್ತೆ ವಹಿವಾಟುದಾರರ ಸಂಘಟನೆಯ ಮುಖಂಡರ ಪ್ರಕಾರ ಈಗಾಗಲೇ ಅಲ್ಲಿ 30 ಅಂಗಡಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಇನ್ನೂ 10 ರಿಂದ 15 ಅಂಗಡಿಗಳು ಬಾಗಿಲು ಹಾಕಲು ಸಿದ್ಧವಾಗುತ್ತಿವೆ.

    ವಾಣಿಜ್ಯ ಸ್ಥಳಗಳ ಲೀಸ್​ಗೆ ಬೇಡಿಕೆಯೇ ಇಲ್ಲ

    ಬೆಂಗಳೂರು ನಗರದಲ್ಲಿ ವಾಣಿಜ್ಯ ವಹಿವಾಟು ನಡೆಸಲು ಸ್ಥಳವನ್ನು ಗುತ್ತಿಗೆ ಪಡೆಯುವುದಕ್ಕೆ ಬೇಡಿಕೆಯೇ ಇಲ್ಲದಂತಾಗಿದೆ. ಒಟ್ಟಾರೆ ಶೇ. 60 ಬೇಡಿಕೆ ಕುಸಿದಿದೆ. 2019ರಲ್ಲಿ ಮೊದಲ ಆರು ತಿಂಗಳಿನಲ್ಲಿ 8.5 ದಶಲಕ್ಷ ಚ.ಅಡಿ ಜಾಗ ಲೀಸ್​ಗೆ ನೀಡಲಾಗಿತ್ತು. ಆದರೆ 2020ರ ಇದೇ ಅವಧಿಯಲ್ಲಿ ಕೇವಲ 3.3 ದಶಲಕ್ಷ ಚದುರ ಅಡಿ ಮಾತ್ರ ಗುತ್ತಿಗೆ ನೀಡಲಾಗಿದೆ. ಅದರಲ್ಲೂ ವಿಶೇಷ ಆರ್ಥಿಕ ವಲಯದಲ್ಲಿ ಈ ಪ್ರಮಾಣ ಶೇ. 85 ಕುಸಿದಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮದ ಮೂಲಗಳು ಹೇಳುತ್ತವೆ.

    ಕರೊನಾದಿಂದಾಗಿ ವ್ಯಾಪಾರ ಉದ್ಯಮ ಕ್ಷೇತ್ರ ಸಾಕಷ್ಟು ಸಮಸ್ಯೆ ಕಂಡಿದೆ. ನೆರವಿಗೆ ಬರುವಂತೆ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಕಾರ್ವಿುಕರು ವಾಪಸ್ ಬಂದರೆ ಸಮಸ್ಯೆ ಬಗೆಹರಿಯುತ್ತದೆ. ಬೀದಿಬದಿ ವ್ಯಾಪಾರಿಗಳು ಎಷ್ಟು ಜನ ಬೀದಿಗೆ ಬಿದ್ದಿದ್ದಾರೋ ಅಂದಾಜಿಗೆ ಸಿಗುತ್ತಿಲ್ಲ. ಆನ್​ಲೈನ್ ವಹಿವಾಟಿಗೂ ನಾವು ಸಜ್ಜಾಗಬೇಕಾಗಿದೆ.
    -ಡಾ. ಆರ್. ರಾಜೇಶ್ವರಿ ಅಧ್ಯಕ್ಷೆ, ಮಹಿಳಾ ಉದ್ಯಮಿಗಳ ಒಕ್ಕೂಟ

    ಬೆಂಗಳೂರಲ್ಲೇ ಹೆಚ್ಚು

    ರಾಜಧಾನಿ ಬೆಂಗಳೂರಿನಲ್ಲೇ ಅತೀ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಅಂಗಡಿಗಳು ಬಾಗಿಲು ಮುಚ್ಚಿವೆ. ಈ ಸಂಖ್ಯೆ ಸುಮಾರು ಅರ್ಧ ಲಕ್ಷ ದಾಟಿರುವ ಸಾಧ್ಯತೆ ಇದೆ.

    ಕಾರಣಗಳೇನು?

    • ವ್ಯಾಪಾರ ಮೊದಲಿನಂತೆ ಇಲ್ಲ
    • ಬಾಡಿಗೆ ಕಟ್ಟಲು ಸಾಧ್ಯವಿಲ್ಲ
    • ಬಡ್ಡಿ ಪಾವತಿಗೆ ಸಮಸ್ಯೆ
    • ಇಎಂಐ ಕಟ್ಟುವುದಕ್ಕೆ ಆಗಲ್ಲ
    • ನೌಕರರ ಸಂಬಳ ಸಮಸ್ಯೆ

    ವ್ಯಾಪಾರಿಗಳ ನಿರೀಕ್ಷೆ

    • ವಿದ್ಯುತ್ ದರದಲ್ಲಿ ವಿನಾಯಿತಿ
    • ಸಾಲ ಸೌಲಭ್ಯ
    • ಬಡ್ಡಿ ಮನ್ನಾ
    • ಬಾಡಿಗೆ ಕಡಿಮೆ ಮಾಡಿಸುವುದು
    • ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹ
    • ಆನ್​ಲೈನ್ ವ್ಯಾಪಾರಕ್ಕೆ ತರಬೇತಿ

    ಯಾವೆಲ್ಲ ಮಳಿಗೆ ಕ್ಲೋಸ್?

    • ರೆಡಿಮೇಡ್ ಬಟ್ಟೆ
    • ಗ್ಯಾರೇಜ್​ಗಳು
    • ಆಟೋ ಕಾಂಪೊನೆಂಟ್
    • ರೆಸ್ಟೋರೆಂಟ್, ಹೋಟೆಲ್
    • ತೆಂಗಿನಕಾಯಿ ಮಳಿಗೆ
    • ಪ್ರಿಂಟಿಂಗ್ ಪ್ರೆಸ್
    • ಸಲೂನ್
    • ಬ್ಯೂಟಿ ಪಾರ್ಲರ್
    • ಕೇಟರಿಂಗ್
    • ಚಿತ್ರಮಂದಿರ
    • ಸ್ಟುಡಿಯೋ
    • ಜೆರಾಕ್ಸ್
    • ಫುಟ್​ವೇರ್
    • ಸ್ಟೇಷನರಿ
    • ಮೊಬೈಲ್ ಮಾರಾಟ
    • ಸಾರಿಗೆ
    • ಕಲ್ಯಾಣ ಮಂಟಪ
    • ಪ್ರವಾಸೋದ್ಯಮ
    • ನೇಕಾರರು
    • ಇತ್ಯಾದಿ

    ಐಟಿ ಉತ್ಪಾದಕತೆ ಹೆಚ್ಚಳ

    ರಾಜ್ಯದ ಸಣ್ಣ ಉದ್ಯಮ ಕ್ಷೇತ್ರ ತೊಂದರೆಗೆ ಒಳಗಾಗಿದ್ದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇದಕ್ಕೆ ವ್ಯತಿರಿಕ್ತ ಬೆಳವಣಿಗೆ ಸಾಧಿಸಿದೆ. ಮನೆಯಿಂದಲೇ ಕೆಲಸದಿಂದಾಗಿ ಉತ್ಪಾದಕತೆ ಶೇ.40 ಹೆಚ್ಚಳವಾಗಿದೆ. ಐಟಿ ಕಂಪನಿಗಳಲ್ಲಿ ಶೇ.39 ರಿಂದ 40ರಷ್ಟು ವಿದ್ಯುತ್, ನೀರಿನ ಬಿಲ್ ಉಳಿತಾಯವಾಗಿದೆ. ಇದರಿಂದಾಗಿಯೇ ಅನೇಕ ದೊಡ್ಡ ಐಟಿ ಸಂಸ್ಥೆಗಳು ಮನೆಯಿಂದಲೇ ಕೆಲಸ ಮುಂದುವರಿಸಿ ಮಾನವ ಸಂಪನ್ಮೂಲ ವಿಭಾಗದ ಕರ್ತವ್ಯಕ್ಕೆ ಸಣ್ಣ ಕಚೇರಿ ತೆರೆಯಲು ಮುಂದಾಗಿರುವುದನ್ನು ಮೂಲಗಳು ಖಚಿತಪಡಿಸಿವೆ. ಅದಕ್ಕೆ ತಕ್ಕಂತೆ ಕಾರ್ವಿುಕ ಕಾನೂನು ಬದಲಾವಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಹ ಮಾಡಿಕೊಂಡಿವೆ.

    ವ್ಯಾಪಾರ ಕುಸಿತವಾಗಿ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಂಗಡಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಇದರಿಂದಾಗಿ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಕೆಲವೊಂದು ನೆರವು ನೀಡಿದೆ. ಇನ್ನಷ್ಟು ನಿರೀಕ್ಷೆ ಮಾಡುತ್ತಿದ್ದೇವೆ. ವಹಿವಾಟು ನಡೆದರೆ ಸರ್ಕಾರಕ್ಕೆ ತೆರಿಗೆ ಬರುತ್ತದೆ.
    | ಸಿ.ಆರ್. ಜನಾರ್ದನ ಅಧ್ಯಕ್ಷ, ಎಫ್​ಕೆಸಿಸಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts