ನ್ಯೂಸ್

ನನಗೆ ಸೂಪರ್​ಪವರ್​ ಇದೆ ಏನು ಆಗಲ್ಲ ಎಂದು ಹಾಸ್ಟೆಲ್​ 4ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ! ನಂತರ ನಡೆದಿದ್ದಿಷ್ಟು... | College Student

College Student : ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಜಿಗಿದ 19 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಕೊಯಮತ್ತೂರು ಬಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಭು, ತನಗೆ ಸೂಪರ್​ಪವರ್​ ಇದೆ ಎಂದು ಹೇಳಿ, ಅದನ್ನು ಪ್ರದರ್ಶಿಸಲು ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ಬಿದ್ದ ರಭಸಕ್ಕೆ ಕಾಲು, ಕೈ ಮುರಿದು ತಲೆಗೆ ತೀವ್ರ ಪೆಟ್ಟಾಗಿದೆ.

ಈ ಘಟನೆ ಕೊಯಮತ್ತೂರಿನ ಮಲುಮಿಚಂಪಟ್ಟಿ ಬಳಿಯ ಮೈಲೇರಿಪಾಳ್ಯಂನಲ್ಲಿ ಸೋಮವಾರ (ಅ.28) ಸಂಜೆ ನಡೆದಿದೆ. ವಿದ್ಯಾರ್ಥಿ ಪ್ರಭು, ಈರೋಡ್​ ಜಿಲ್ಲೆಯ ಪೆರುಂದರೈ ಬಳಿಯ ಮೆಕ್ಕೂರು ಗ್ರಾಮದ ನಿವಾಸಿ. ಮೂರನೇ ವರ್ಷದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿದ್ಯಾರ್ಥಿಯಾಗಿರುವ ಪ್ರಭು, ಕಾಲೇಜು ಹಾಸ್ಟೆಲ್​ನಲ್ಲಿ ಉಳಿದುಕೊಂಡು ಓದುತ್ತಿದ್ದಾರೆ.

ಇತ್ತೀಚೆಗೆ ತುಂಬಾ ವಿಚಲಿತನಾಗಿದ್ದ ಪ್ರಭು, ತಾನು ವಾಮಾಚಾರದ ಪ್ರಭಾವಕ್ಕೆ ಒಳಗಾಗಿರುವುದಾಗಿ ತನ್ನ ಸ್ನೇಹಿತರು ಮತ್ತು ರೂಮ್‌ಮೇಟ್‌ಗಳಿಗೆ ಕಳೆದ ವಾರವಷ್ಟೇ ತಿಳಿಸಿದ್ದನು. ಅಲ್ಲದೆ, ತನಗೆ ಸೂಪರ್​ಪವರ್​ ಇದ್ದು, ಯಾವುದೇ ಕಟ್ಟಡದಿಂದ ಜಿಗಿದರೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿಕೊಂಡಿದ್ದನು ಅಂತ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ 6.30ರ ಸುಮಾರಿಗೆ ಇಬ್ಬರು ವಿದ್ಯಾರ್ಥಿಗಳು ವರಾಂಡಾದಲ್ಲಿ ನಿಂತಿದ್ದಾಗ ಪ್ರಭು ಅವರು ತಮ್ಮ ಕಾಲೇಜು ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಇದ್ದಕ್ಕಿದ್ದಂತೆ ಜಿಗಿದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಕೈಕಾಲು ಮತ್ತು ತಲೆಗೆ ಗಾಯಗಳಾಗಿವೆ. ಕೂಡಲೇ ಪ್ರಭು ಅವರನ್ನು ಇತರ ವಿದ್ಯಾರ್ಥಿಗಳು ಒತಕ್ಕಲ್‌ಮಂಡಪಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಗಂಗಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಚೆಟ್ಟಿಪಾಳ್ಯಂ ಪೊಲೀಸ್ ಸಬ್​ ಇನ್ಸ್​ಪೆಕ್ಟರ್​ ಕರುಪ್ಪಸಾಮಿ ಪಾಂಡಿಯನ್, ಪ್ರಭು ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಕೆಲವು ವಿಡಿಯೋಗಳು ಸಿಕ್ಕಿವೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಪ್ರಭು, ಗೋಡೆ ಮತ್ತು ಅದರ ಎತ್ತರದ ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಪ್ರಭು ಸ್ಥಿತಿ ಸ್ಥಿರವಾಗಿದೆ. ಆದರೆ, ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಚೆಟ್ಟಿಪಾಳ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)