ನ್ಯೂಸ್

ತಣ್ಣಗಾದ ಜ್ವಾಲಾಮುಖಿಗಳಿಂದ ಕಡಿಮೆಯಾದ ಚಳಿ!: ಇಬ್ಬನಿ ಕೊರತೆಯಿಂದ ಕೃಷಿ ಬೆಳೆಗಳಲ್ಲಿ ಇಳುವರಿ ಕುಸಿತ; ವಾಡಿಕೆಗೂ ಮೊದಲೇ ರಾಜ್ಯದಲ್ಲಿ ಥಂಡಿ ಶುರು

| ರಾಮಕಿಶನ್ ಕೆ.ವಿ. ಬೆಂಗಳೂರು

ರಾಜ್ಯದಲ್ಲಿ ಈ ವರ್ಷ ವಾಡಿಕೆಗೂ ಮುನ್ನವೇ ಚಳಿಗಾಲದ ವಾತಾವರಣ ಸೃಷ್ಟಿಯಾಗಿದೆ. ಎಲ್ಲಡೆ ಥಂಡಿ ಕಂಡುಬರುತ್ತಿದೆ. ಆದರೆ ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಹಿಂದಿನ ವರ್ಷಗಳಿಗಿಂತ ಚಳಿ ಕಡಿಮೆಯಾಗಿದೆ.

ಸಾಮಾನ್ಯವಾಗಿ ನವೆಂಬರ್ ಕೊನೆಯಲ್ಲಿ ಶುರುವಾಗುವ ಚಳಿಗಾಲ ಫೆಬ್ರವರಿವರೆಗೆ ಇರುತ್ತದೆ. ಹಿಂಗಾರು ಮಳೆ ಕ್ಷೀಣಿಸಿದ ಬೆನ್ನಲ್ಲೇ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿ ಶುರುವಾಗಿದೆ. ನಾಲ್ಕೈದು ದಿನಗಳಿಂದ ತಂಪಾದ ವಾತಾವರಣ ಕಂಡುಬರುತ್ತಿದ್ದು, ರಾತ್ರಿ ವೇಳೆ ಹೆಚ್ಚಾಗಿ ಚಳಿ ಆವರಿಸಿಕೊಂಡ ಅನುಭವವಾಗುತ್ತಿದೆ. 2021ರಲ್ಲಿ ಚಳಿಗಾಲ ಅವಧಿ ಹೆಚ್ಚು ದಿನಗಳಿತ್ತು. 2022ರಲ್ಲಿಯೂ ಚಳಿ ತೀವ್ರವಾಗಿತ್ತು. ಈ ಬಾರಿ ಚಳಿ ಅಷ್ಟೇನೂ ಇರುವುದಿಲ್ಲ. ಬೆಂಗಳೂರು, ಕಾರವಾರ, ಮಂಗಳೂರು, ಹೊನ್ನಾವರ, ಮಂಡ್ಯ, ರಾಯಚೂರು, ವಿಜಯಪುರ ಸೇರಿ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆಯಾಗಿದೆ.

ತಣ್ಣಗಾದ ಜ್ವಾಲಾಮುಖಿಗಳು!: ಭಾರತದ ಸುತ್ತಮುತ್ತ ಇರುವಂತಹ ಕೆಲವು ಜ್ವಾಲಾಮುಖಿಗಳು ಸದ್ಯ ಸಕ್ರಿಯ ಸ್ಥಿತಿಯಲ್ಲಿಲ್ಲ. ಅವುಗಳಿಂದ ಬರುತ್ತಿದ್ದಂತಹ ಆವಿ ಕೂಡ ಕಡಿಮೆಯಾಗಿದೆ. ಇದರಿಂದಾಗಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಮಳೆ ಕ್ಷೀಣಿಸಿತು. 2017ರಿಂದ 2020ರವರೆಗೆ ಫಿಲಿಫೈನ್ಸ್, ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದ ಒಳಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಜ್ವಾಲಾಮುಖಿ ಸ್ಪೋಟಗಳಾಗಿದ್ದವು. ಇದು ಈ ವರ್ಷ ಮರುಕಳಿಸಿಲ್ಲ. ವಾತಾವರಣದಲ್ಲಿ ಆರ್ದತೆಯೂ ಕಡಿಮೆಯಾಗಿರುವುದರಿಂದ ಒಣ ಹವೆ ಇದೆ. ಇದರಿಂದ ಮಂಜಿನಿಂದ ಕೂಡಿದ ಚಳಿಗಾಲದ ಅನುಭವ ಸಾಧ್ಯತೆ ಕಡಿಮೆ ಎಂದು ಭೂವಿಜ್ಞಾನಿ ಡಾ.ಪ್ರಕಾಶ್ ವಿಶ್ಲೇಷಿಸಿದ್ದಾರೆ.

ಹೆಚ್ಚು ಮಳೆಯಾಗುತ್ತಿದ್ದರೆ ಮಣ್ಣಿನ ಪದರದಲ್ಲಿ ನೀರಿನ ಅಂಶ ಇರುತ್ತದೆ. ಪ್ರಸ್ತುತ ಮಣ್ಣು ಕೂಡ ಒಣಗಿದೆ. ಮೋಡ ಹಾಗೂ ಮಣ್ಣಿನ ಅಂಶಗಳು ಚಳಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ಚಳಿ ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ಆದರೆ, ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚಳಿ ಕಡಿಮೆ ಇರಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕೃಷಿ ಚಟುವಟಿಕೆ ಮೇಲೂ ಪರಿಣಾಮ: ಚಳಿಗಾಲ ಆರಂಭವಾಗುತ್ತಿದ್ದಂತೆ ಇಬ್ಬನಿ ಬೀಳಲು ಆರಂಭವಾಗುತ್ತದೆ. ಇದು ಕೃಷಿಕರಿಗೆ ಉತ್ತಮ ಫಸಲು ಪಡೆಯಲು ನೆರವು ಮಾಡಿಕೊಡುತ್ತದೆ. ಚಳಿ ಕುಂಠಿತವಾದರೆ ಮಂಜಿನ ವಾತಾವರಣ ಇರದು. ಇದರಿಂದ ಬೆಳೆಗಳಿಗೆ ನೀರಿನ ಅಂಶ ಕಡಿಮೆಯಾಗಿ, ಫಸಲಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದರಿಂದ ಜೊಳ್ಳು ತುಂಬಿದ ತೆನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ. ಪ್ರಕಾಶ್.

ಎಚ್ಚರಿಕೆ ಇರಲಿ: ವಾಯುವಿಹಾರ, ವ್ಯಾಯಾಮಕ್ಕೆ ಹೋಗುವವರು ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಎಲಬು-ಕೀಲು ನೋವಿನಿಂದ ಬಳಲುತ್ತಿರುವವರು ಈ ಅವಧಿಯಲ್ಲಿ ಹೊರಹೋಗದಿರುವುದು ಉತ್ತಮ. ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿ ಇತರ ಕಾಯಿಲೆಗಳು ಎದುರಾಗಲಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮ ತೆಗೆದು ಕೈಗೊಳ್ಳಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ದೂಳಿನಿಂದ ದೂರವಿದ್ದು, ಒಣಗಿಸಿದ ಬಟ್ಟೆ ಧರಿಸುವುದು ಸೂಕ್ತ.

ಎಲ್ ನಿನೊ ಕಾರಣದಿಂದ ಏರಿಕೆಯಾದ ಉಷ್ಣಾಂಶ: ಸಮುದ್ರ ಮತ್ತು ವಾತಾವರಣದ ಮೇಲೆ ಉಂಟಾಗುವ ಎಲ್ ನಿನೊ ಪರಿಸ್ಥಿತಿಯಿಂದ ವಾಡಿಕೆಯಷ್ಟು ಮುಂಗಾರು ಮಳೆ ಆಗಿರಲಿಲ್ಲ. ಎಲ್ ನಿನೊ ಪ್ರಭಾವ ಮುಂದಿನ ಮಾರ್ಚ್​ವರೆಗೆ ಇರಲಿದ್ದು, ಚಳಿಗಾಲದ ಮೇಲೆ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಉಷ್ಣಾಂಶ ಏರಿಕೆಯಿಂದಾಗಿ ಚಳಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ವಿಜ್ಞಾನಿಗಳು ಊಹಿಸಿದ್ದಾರೆ.